ಯೂನ್ ಸುಕ್ ಯೋಲ್
ಸೋಲ್: ಪದಚ್ಯುತಗೊಂಡಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ಇಲ್ಲಿನ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.
ಇದರ ಬೆನ್ನಲ್ಲೇ, ಅವರ ಖಾಸಗಿ ನಿವಾಸದ ಮುಂದೆ ನೂರಾರು ಮಂದಿ ಬೆಂಬಲಿಗರು ಜಮಾಯಿಸಿದ್ದಾರೆ.
ಡಿ.3ರಂದು ದೇಶದಲ್ಲಿ ಮಿಲಿಟರಿ ಆಡಳಿತ ಜಾರಿಗೊಳಿಸಿದ್ದಕ್ಕಾಗಿ ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ಸೂಚಿಸಿದ್ದರೂ ಹಾಜರಾಗಿರಲಿಲ್ಲ. ಹೀಗಾಗಿ, ಬಂಧನ ವಾರಂಟ್ ಹೊರಡಿಸಲಾಗಿದೆ.
ಇದರ ಬೆನ್ನಲ್ಲೇ ಮಂಗಳವಾರ ಮಧ್ಯಾಹ್ನದ ವೇಳೆಗೆ ಬೆಂಬಲಿಗರು ಭಿತ್ತಿಪತ್ರಗಳನ್ನು ಹಿಡಿದುಕೊಂಡು ಅವರ ಮನೆ ಮುಂದೆ ಜಮಾಯಿಸಿದರು. ‘ಸೇನಾ ಆಡಳಿತವು ಕಾನೂನು ಬದ್ಧವಾಗಿದೆ. ಪದಚ್ಯುತಿಗೆ ಯಾವುದೇ ಮಾನ್ಯತೆಯಿಲ್ಲ‘ ಎಂದು ಫಲಕಗಳನ್ನು ಪ್ರದರ್ಶಿಸಿದರು.
‘ಬಂಧನ ಹಾಗೂ ಶೋಧ ವಾರಂಟ್ ಅನ್ನು ಮಂಗಳವಾರ ಬೆಳಿಗ್ಗೆ ಹೊರಡಿಸಲಾಗಿದೆ’ ಎಂದು ಯೂನ್ ಕುರಿತು ಜಂಟಿ ತನಿಖೆ ನಡೆಸುತ್ತಿರುವ ತನಿಖಾ ತಂಡವು ಪ್ರಕಟಣೆಯಲ್ಲಿ ತಿಳಿಸಿದೆ.
ತನಿಖಾಧಿಕಾರಿಗಳು ಹಾಗೂ ಪೊಲೀಸರು ಬಂಧನ ವಾರಂಟ್ ಜಾರಿಗೊಳಿಸುವ ಕುರಿತು ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
ಮಿಲಿಟರಿ ಆಡಳಿತ ಜಾರಿಗೊಳಿಸಿದ ಯೂನ್ ಸುಕ್ ಯೋಲ್ ಅವರನ್ನು ಈಗಾಗಲೇ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.