ADVERTISEMENT

ಟ್ರಂಪ್‌ಗೆ ಹಿಗ್ಗಾಮುಗ್ಗಾ ಬೈದ ಪಾಪ್‌ ಗಾಯಕಿ ಸಬ್ರಿನಾ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2025, 12:55 IST
Last Updated 5 ಡಿಸೆಂಬರ್ 2025, 12:55 IST
   

ವಾಷಿಂಗ್ಟನ್‌: ಅನುಮತಿ ಪಡೆಯದೇ ‘ಗಡೀಪಾರು ಅಭಿಯಾನ’ವನ್ನು ಪ್ರೋತ್ಸಾಹಿಸುವ ವಿಡಿಯೊಗೆ ತಮ್ಮ ಹಾಡನ್ನು ಬಳಸಿಕೊಂಡಿದ್ದಕ್ಕೆ ಗ್ರ್ಯಾಮಿ ಪ್ರಶಸ್ತಿ ವಿಜೇತ ಪಾಪ್‌ ತಾರೆ ಸಬ್ರಿನಾ ಕಾರ್ಪೆಂಟರ್ ಟ್ರಂಪ್‌ ಆಡಳಿತವನ್ನು ಸಾರ್ವಜನಿಕವಾಗಿ ಖಂಡಿಸಿದ್ದಾರೆ.

2024ರಲ್ಲಿ ಬಿಡುಗಡೆಯಾದ ‘ಶಾರ್ಟ್ ಆ್ಯಂಡ್ ಸ್ವೀಟ್‌’ ಆಲ್ಬಮ್‌ನ ‘ಜುನೋ’ ಹಾಡನ್ನು ವಿಡಿಯೊದಲ್ಲಿ ಬಳಸಲಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಸಬ್ರಿನಾ , ‘ಈ ವಿಡಿಯೊ ದುಷ್ಟತನದಿಂದ ಕೂಡಿದ್ದು, ಅಸಹ್ಯಕರವಾಗಿದೆ. ನಿಮ್ಮ ಅಮಾನವೀಯ ಕಾರ್ಯಸೂಚಿಗೆ ಲಾಭವಾಗಲು ನನ್ನನ್ನು ಅಥವಾ ನನ್ನ ಸಂಗೀತವನ್ನು ಬಳಸಿಕೊಳ್ಳಬೇಡಿ’ ಎಂದು ಹೇಳಿದ್ದಾರೆ.

ವಲಸೆ ಅಧಿಕಾರಿಗಳು ಅಕ್ರಮ ವಲಸಿಗರನ್ನು ಗಡೀಪಾರು ಮಾಡುತ್ತಿರುವ ವಿಡಿಯೊದಲ್ಲಿ ಈ ಹಾಡನ್ನು ಬಳಸಿಕೊಳ್ಳಲಾಗಿದೆ. ಆ ಹಾಡಿನ ಒಂದು ಸಾಲನ್ನು (ಹ್ಯಾವ್‌ ಯು ಎವರ್ ಟ್ರೈ ದಿಸ್‌ ಒನ್‌? ಬೈ ಬೈ) ವಿಡಿಯೊಗೆ ಶೀರ್ಷಿಕೆಯಾಗಿ ಬಳಸಿಕೊಳ್ಳಲಾಗಿದೆ.

ADVERTISEMENT

ಸಬ್ರಿನಾ ಅಲ್ಲದೇ ತಮ್ಮ ಜನಪ್ರಿಯ ಕಾರ್ಟೂನ್‌ ಪಾತ್ರವನ್ನು ಗಡೀಪಾರು ಅಭಿಯಾನಕ್ಕೆ ಬಳಸಿಕೊಂಡದ್ದಕ್ಕಾಗಿ ‘ಫ್ರಾಂಕ್ಲಿನ್ ದಿ ಟರ್ಟಲ್’ ಪ್ರಕಾಶಕ ‘ಕಿಡ್ಸ್ ಕ್ಯಾನ್ ಪ್ರೆಸ್’ ಕೂಡ ಟ್ರಂಪ್‌ ಆಡಳಿತವನ್ನು ಕಟುವಾಗಿ ಟೀಕಿಸಿದೆ.

‘ಫ್ರಾಂಕ್ಲಿನ್ ಟರ್ಟಲ್ ಕೆನಡಾದ ಪ್ರೀತಿಯ ಐಕಾನ್ ಆಗಿದ್ದು, ಫ್ರಾಂಕ್ಲಿನ್ ಹೆಸರು ಅಥವಾ ಚಿತ್ರವನ್ನು ಹಿಂಸಾತ್ಮಕ ಕೆಲಸಗಳಿಗೆ ಬಳಸುವುದನ್ನು ನಾವು ಖಂಡಿಸುತ್ತೇವೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.