ADVERTISEMENT

ರಶ್ದಿ ಆರೋಗ್ಯದಲ್ಲಿ ಚೇತರಿಕೆ; ವೆಂಟಿಲೇಟರ್‌ ತೆರವು

ಪಿಟಿಐ
Published 14 ಆಗಸ್ಟ್ 2022, 15:40 IST
Last Updated 14 ಆಗಸ್ಟ್ 2022, 15:40 IST
ಸಲ್ಮಾನ್ ರಶ್ದಿ
ಸಲ್ಮಾನ್ ರಶ್ದಿ   

ನ್ಯೂಯಾರ್ಕ್‌: ದುಷ್ಕರ್ಮಿಯ ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿದ್ದ ಲೇಖಕ ಸಲ್ಮಾನ್‌ ರಶ್ದಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿದೆ. ಅವರಿಗೆ ಅಳವಡಿಸಿದ್ದ ಕೃತಕ ಉಸಿರಾಟ ವ್ಯವಸ್ಥೆಯನ್ನು ಭಾನುವಾರ ತೆಗೆಯಲಾಗಿದ್ದು, ಸದ್ಯ ಅವರು ಮಾತನಾಡುವ ಸ್ಥಿತಿಯಲ್ಲಿದ್ದಾರೆ.

ರಶ್ದಿಅವರ ಪ್ರತಿನಿಧಿ ಆಂಡ್ರ್ಯೂವೈಲಿ ಕೂಡ ಈ ಮಾಹಿತಿ ಖಚಿತಪಡಿಸಿದ್ದಾರೆ. ಆದರೆ,ರಶ್ದಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

‘ಸಲ್ಮಾನ್ರಶ್ದಿಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ತೆಗೆಯಲಾಗಿದೆ. ಅವರು ಮಾತನಾಡುತ್ತಿದ್ದಾರೆ! ಅವರು ಗುಣಮುಖರಾಗಲೆಂದು ಷಟೌಕ್ವಾದ ಎಲ್ಲಾ ಜನತೆ ನಿರಂತರ ಪ್ರಾರ್ಥಿಸುತ್ತಿದ್ದಾರೆ’ ಷಟೌಕ್ವಾ ಸಂಸ್ಥೆಯ ಅಧ್ಯಕ್ಷ ಮೈಕೆಲ್ ಹಿಲ್ ಶನಿವಾರ ರಾತ್ರಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ADVERTISEMENT

ನಾನು ನಿರಪರಾಧಿ– ಆರೋಪಿ ವಾದ : ‘ಸಲ್ಮಾನ್‌ ರಶ್ದಿ ಅವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಆರೋಪಿ ನ್ಯೂಜೆರ್ಸಿಯ ಫೇರ್‌ಫೀಲ್ಡ್‌ ಮೂಲದ 24 ವರ್ಷದ ಯುವಕ ಹದಿ ಮಟರ್‌ ನಾನು ತಪ್ಪು ಮಾಡಿಲ್ಲ, ನಾನು ಮುಗ್ಧ, ನಿರಪರಾಧಿ’ ಎಂದು ವಾದಿಸಿದ್ದಾನೆ.

ಆರೋಪಿ ತಾನು ನಿರಪರಾಧಿ ಎಂದು ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದಾನೆ. ನ್ಯಾಯಾಲಯ ಜಾಮೀನು ನೀಡಿಲ್ಲ, ಸದ್ಯ ಆರೋಪಿಯನ್ನುಷಟೌಕ್ವಾ ಜಿಲ್ಲಾ ಕಾರಾಗೃಹದಲ್ಲಿರಿಸಲಾಗಿದೆ ಎಂದು ನ್ಯೂಯಾರ್ಕ್ ಪೊಲೀಸರು ತಿಳಿಸಿದ್ದಾರೆ.

ಉಗ್ರರಿಗೆ ಸಹಾನುಭೂತಿ ಹೊಂದಿದ್ದ: ‘ಹದಿ ಮಟರ್ ಮೇಲೆ ಕೊಲೆ ಯತ್ನ ಮತ್ತು ಹಲ್ಲೆ ಆರೋಪ ಹೊರಿಸಲಾಗಿದೆ. ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಆತ ಶಿಯಾ ಉಗ್ರವಾದ ಮತ್ತು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನೊಂದಿಗೆ (ಐಆರ್‌ಜಿಸಿ) ಸಹಾನುಭೂತಿ ಹೊಂದಿರುವುದು ಬಹಿರಂಗವಾಗಿದೆ ಎಂದು ತನಿಖಾ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.