ADVERTISEMENT

ಸಲ್ಮಾನ್ ರಶ್ದಿ ಮೇಲಿನ ದಾಳಿ ನನ್ನ ಸ್ವಯಂ ನಿರ್ಧಾರ: ಆರೋಪಿ ಹದಿ ಮಟರ್

ಪಿಟಿಐ
Published 18 ಆಗಸ್ಟ್ 2022, 9:47 IST
Last Updated 18 ಆಗಸ್ಟ್ 2022, 9:47 IST
   

ನ್ಯೂಯಾರ್ಕ್: ಮುಂಬೈ ಮೂಲದ ಲೇಖಕ ಸಲ್ಮಾನ್ ರಶ್ದಿ ಮೇಲಿನ ದಾಳಿ ನನ್ನ ಸ್ವಯಂ ನಿರ್ಧಾರ ಎಂದು ಆರೋಪಿ ಹದಿ ಮಟರ್ ಹೇಳಿದ್ದಾನೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ)ನೊಂದಿಗೆ ಸಂಪರ್ಕದಲ್ಲಿರುವುದನ್ನು ನಿರಾಕರಿಸಿರುವ ಆತ, ನಾನೊಬ್ಬನೇ ಏಕಾಂಗಿಯಾಗಿ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾನೆ. ರಶ್ದಿ ಅಪ್ರಜ್ಞಾಪೂರ್ವಕವಾಗಿ ವರ್ತಿಸಿದ್ದಾರೆ ಎಂದು ತಾನು ಸ್ವಇಚ್ಛೆಯಿಂದ ದಾಳಿ ಮಾಡಿದೆ ಎಂದು ಆತ ಹೇಳಿದ್ಧಾನೆ.

ನ್ಯೂಜೆರ್ಸಿಯ ಫೇರ್‌ಫೀಲ್ಡ್‌ ಮೂಲದ 24 ವರ್ಷದ ಆರೋಪಿ ಹದಿ ಮಟರ್‌ನನ್ನು ಕಳೆದ ವಾರ ಬಂಧಿಸಲಾಗಿತ್ತು.

ADVERTISEMENT

ನ್ಯೂಯಾರ್ಕ್ ರಾಜ್ಯದ ಷಟೌಕ್ವಾ ಸಂಸ್ಥೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ರಶ್ದಿ(75) ಅವರಿಗೆ ಆರೋಪಿ ವೇದಿಕೆಯ ಮೇಲೆ ಚಾಕುವಿನಿಂದ ಹಲವು ಬಾರಿ ಇರಿದಿದ್ದ.

ಷಟೌಕ್ವಾ ಕೌಂಟಿ ಜೈಲಿನಿಂದ ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ವಿಡಿಯೊ ಸಂದರ್ಶನದಲ್ಲಿ ಮಾತನಾಡಿರುವ ಆರೋಪಿ ಹದಿ ಮಟರ್, ‘ಅವರು(ಸಲ್ಮಾನ್ ರಶ್ದಿ) ಬದುಕುಳಿದರು ಎಂಬುದನ್ನು ಕೇಳಿದಾಗ ನನಗೆ ಆಶ್ಚರ್ಯವಾಯಿತು’ಎಂದು ಹೇಳಿದ್ದಾನೆ.

ರಶ್ದಿ ಅವರ ಕುತ್ತಿಗೆಗೆ ಮೂರು ಇರಿತದ ಗಾಯಗಳು, ಅವರ ಹೊಟ್ಟೆಯಲ್ಲಿ ನಾಲ್ಕು ಇರಿತದ ಗಾಯಗಳು, ಅವರ ಬಲ ಕಣ್ಣು ಮತ್ತು ಎದೆಗೂ ಗಾಯಗಳಾಗಿದ್ದವು. ದಾಳಿಯಿಂದಾಗಿ ಅವರ ಬಲ ತೊಡೆಯು ಸೀಳಿತ್ತು ಎಂದು ಎಂದು ಷಟೌಕ್ವಾ ಕೌಂಟಿಯ ಜಿಲ್ಲಾ ಅಟಾರ್ನಿ ಜೇಸನ್ ಸ್ಮಿತ್ ಹೇಳಿದ್ದಾರೆ.

1989ರಲ್ಲಿ "ದಿ ಸೆಟನಿಕ್ ವರ್ಸಸ್’ಕೃತಿ ಪ್ರಕಟವಾದ ನಂತರ ರಶ್ದಿಯವರ ಹತ್ಯೆಗೆ ಕರೆ ನೀಡಿ ಫತ್ವಾ ಹೊರಡಿಸಿದ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರಿಂದ ಸ್ಫೂರ್ತಿ ಪಡೆದಿದ್ದಾರೆಯೇ ಎಂಬ ಬಗ್ಗೆ ಮಟರ್ ಪ್ರತಿಕ್ರಿಯಿಸಲಿಲ್ಲ.

‘ನಾನು ಅಯತೊಲ್ಲಾ ಅವರನ್ನು ಗೌರವಿಸುತ್ತೇನೆ. ಅವರು ಮಹಾನ್ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ಅಷ್ಟು ಮಾತ್ರ ನಾನು ಹೇಳಬಹುದು’ಎಂದಿದ್ದಾನೆ.

ರಶ್ದಿಯವರ ವಿವಾದಾತ್ಮಕ ಕಾದಂಬರಿಯ ಎರಡು ಪುಟಗಳನ್ನಷ್ಟೇ ಓದಿದ್ದು, ಸಂಪೂರ್ಣ ಕಾದಂಬರಿಯನ್ನು ಓದಿಲ್ಲ ಎಂದು ಆರೋ‍ಪಿ ಹೇಳಿದ್ದಾನೆ.

ಅಮೆರಿಕ ಮೂಲಕ ದಂಪತಿಯ ಪುತ್ರನಾದ ಮಟರ್, ದಕ್ಷಿಣ ಲೆಬನಾನ್‌ನಲ್ಲಿ ಜನಿಸಿದ್ದಾನೆ ಎಂದು ವರದಿಗಳು ಹೇಳುತ್ತವೆ.

ಐಆರ್‌ಜಿಸಿ ಇರಾನ್‌ನಲ್ಲಿನ ಪ್ರಮುಖ ಮಿಲಿಟರಿ ಮತ್ತು ರಾಜಕೀಯ ಶಕ್ತಿಯಾಗಿದೆ. ಆದರೆ, ಮಟರ್ ಮತ್ತು ಐಆರ್‌ಜಿಸಿ ನಡುವೆ ಯಾವುದೇ ಸಂಪರ್ಕವಿರುವ ಬಗ್ಗೆ ಸಾಕ್ಷ್ಯ ಲಭ್ಯವಾಗಿಲ್ಲ.

ರಶ್ದಿಯವರ ಭೇಟಿ ಕುರಿತಂತೆ ಟ್ವೀಟ್ ಗಮನಿಸಿದ ಬಳಿಕ ಷಟೌಕ್ವಾಗೆ ಹೋಗಲು ನಿರ್ಧರಿಸಿದೆ ಎಂದು ಮಟರ್ ಹೇಳಿದ್ದಾನೆ.

‘ನಾನು ಆ ವ್ಯಕ್ತಿಯನ್ನು ಇಷ್ಟಪಡುವುದಿಲ್ಲ. ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ನಾನು ಭಾವಿಸುವುದಿಲ್ಲ’ಎಂದು ರಶ್ದಿಯನ್ನು ಉದ್ದೇಶಿಸಿ ಮಟರ್ ಹೇಳಿದ್ದಾನೆ.

‘ನಾನು ಅವರನ್ನು(ರಶ್ದಿ) ಇಷ್ಟಪಡುವುದಿಲ್ಲ. ಅವರು ಇಸ್ಲಾಂ ಧರ್ಮದ ಮೇಲೆ ದಾಳಿ ಮಾಡಿದವರು, ನಮ್ಮ ನಂಬಿಕೆಗಳು, ನಂಬಿಕೆಗಳ ವ್ಯವಸ್ಥೆಗಳ ಮೇಲೆ ದಾಳಿ ಮಾಡಿದವರು’ಎಂದು ಮಟರ್ ಕಿಡಿ ಕಾರಿದ್ದಾನೆ.

ರಶ್ದಿಯವರ ಬರವಣಿಗೆಯ ಬಗ್ಗೆ ತನಗೆ ಅಷ್ಟಾಗಿ ತಿಳಿದಿಲ್ಲ. ಆದರೆ, ಯೂಟ್ಯೂಬ್‌ನಲ್ಲಿ ಅವರ ವಿಡಿಯೊಗಳನ್ನು ನೋಡಿದ್ದೇನೆ ಎಂದು ಮಟರ್ ಹೇಳಿದ್ದಾನೆ.

‘ನಾನು ಅವರ ಬಹಳಷ್ಟು ಉಪನ್ಯಾಸಗಳನ್ನು ನೋಡಿದ್ದೇನೆ. ಅಂತಹ ಅಸಹ್ಯಕರ ಜನರನ್ನು ನಾನು ಇಷ್ಟಪಡುವುದಿಲ್ಲ’ ಎಂದು ಆರೋಪಿಯು ಆಕ್ರೋಶ ಹೊರ ಹಾಕಿದ್ದಾನೆ.
ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.