ಮೆಲ್ಬರ್ನ್: ಕೋವಿಡ್–19 ಗುಣಪಡಿಸಬಲ್ಲ ಸಾಮರ್ಥ್ಯವುಳ್ಳ ಆರು ಸಂಭಾವ್ಯ ಔಷಧಗಳನ್ನು ವಿಜ್ಞಾನಿಗಳು
ಅಭಿವೃದ್ಧಿಪಡಿಸಿದ್ದಾರೆ. ‘ನೇಚರ್’ ಪತ್ರಿಕೆಯಲ್ಲಿ ಈ ಕುರಿತ ಸಂಶೋಧನಾ ಬರಹ ಪ್ರಕಟವಾಗಿದ್ದು, ಇವುಗಳ ಸಾಮರ್ಥ್ಯವನ್ನು
ಪ್ರಯೋಗಾಲಯದಲ್ಲಿ ಪರೀಕ್ಷೆಗೆ (ಕ್ಲಿನಿಕಲ್ ಟ್ರಯಲ್) ಒಳಪಡಿಸಲಾಗಿದೆ.
‘ಕೊರೊನಾ ವೈರಸ್ ಗುಣಪಡಿಸಲು ಸದ್ಯ ಪರಿಣಾಮಕಾರಿ ಔಷಧ ಅಥವಾ ಚಿಕಿತ್ಸೆ ಲಭ್ಯವಿಲ್ಲ’ ಎಂದು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್
ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲೂಕ್ ಗಡಟ್ ಅವರು ಹೇಳಿದ್ದಾರೆ.
‘ಪ್ರಯೋಗಾಲಯದ ಬಳಕೆಗೆ ಪ್ರಮುಖ ಸಂಯುಕ್ತಗಳನ್ನು ಅತಿವೇಗವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಉನ್ನತ ಮಟ್ಟದ ಔಷಧ
ಪರೀಕ್ಷೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ವೈರಸ್‌ಗೆ ಇವು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಅರಿಯಲು ಪ್ರಯೋಗಾಲಯ
ಹಾಗೂ ಆಧುನಿಕ ಕಂಪ್ಯೂಟರ್ ಸಾಫ್ಟ್‌ವೇರ್ ಮೂಲಕ ಯತ್ನಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ವೈರಲ್ ಪುನರಾವರ್ತನೆಗೆ ಮಧ್ಯಸ್ಥಿಕೆ ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕೋವಿಡ್–19 ವೈರಸ್‌ನ ಕಿಣ್ವವನ್ನು (ಎಂಪ್ರೊ)
ಗುರಿಯಾಗಿಸಿ ಸಂಶೋಧನೆ ನಡೆಯುತ್ತಿದೆ. ವೈರಸ್‌ನ ಕಿಣ್ವಗಳ ಮೇಲೆ ಈ ಔಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲವು’
ಎಂದು ಸಂಶೋಧಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಕಿಣ್ವಗಳನ್ನು ನಿಷ್ಕ್ರಿಯಗೊಳಿಸಲು ಅಥವಾ ವೈರಸ್‌ಗಳನ್ನು ಸಾಯಿಸಲು ಎಷ್ಟು ಸಂಯುಕ್ತಗಳ ಅಗತ್ಯವಿದೆ ಎಂಬುದನ್ನು ಮೌಲ್ಯಮಾಪನ
ಮಾಡುವ ಸಲುವಾಗಿ ಕಿಣ್ವ ಹಾಗೂ ಕೃತಕ ಕೋಶಗಳ ಮೇಲೆ ನೇರವಾಗಿ ಔಷಧಗಳನ್ನು ಪ್ರಯೋಗಿಸಲಾಗಿದೆ. ಕಡಿಮೆ ಸಂಖ್ಯೆಯ ಔಷಧ
ಸಂಯುಕ್ತಗಳೇ ಪರಿಣಾಮಕಾರಿ ಎಂದು ತಿಳಿದುಬಂದರೆ, ಮುಂದಿನ ಅಧ್ಯಯನಕ್ಕೆ ದಾರಿ ಸಿಕ್ಕಂತಾಗುತ್ತದೆ’ ಎಂದು ಗಡಟ್ ಹೇಳಿದ್ದಾರೆ.
ಸಾವಿರಾರು ಔಷಧಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಿದ ಬಳಿಕ ಆರು ಔಷಧಗಳು ಕಿಣ್ವವನ್ನು ಪ್ರತಿಬಂಧಿಸುವ ಸಾಮರ್ಥ್ಯ ಹೊಂದಿವೆ
ಎಂಬ ಅಂಶವನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈಗಾಗಲೇ ಔಷಧಿಗಳ ಸಂಶೋಧನೆಗೆ ಒಳಪಟ್ಟಿರುವ ಸುಮಾರು 10 ಸಾವಿರ
ಸಂಯುಕ್ತಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಈ ಪೈಕಿ ಆರು ಔಷಧ ಸಂಯುಕ್ತಗಳ ಮೇಲೆ ವಿಜ್ಞಾನಿಗಳು ವಿಶ್ವಾಸ ಇಟ್ಟಿದ್ದಾರೆ. ಇದೇಪರಿಶ್ರಮವನ್ನು ಮುಂದುವರಿಸಿದಲ್ಲಿ, ಹೊಸ ಸಂಯುಕ್ತಗಳು ಕೋವಿಡ್ ಔಷಧ ಅಭಿವೃದ್ಧಿಯಲ್ಲಿ ಜತೆಯಾಗುವ ಆಶಾಭಾವ
ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.