ADVERTISEMENT

ಸೊಳ್ಳೆ, ಕೀಟ ಓಡಿಸಲು ಬಂತು 3ಡಿ ಮುದ್ರಿತ ಉಂಗುರ!

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 14:19 IST
Last Updated 12 ಅಕ್ಟೋಬರ್ 2022, 14:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬರ್ಲಿನ್‌: ಸೊಳ್ಳೆ ಮತ್ತು ಕೀಟಗಳ ಕಡಿತದಿಂದ ಮನುಷ್ಯರಿಗೆ ಮುಕ್ತಿ ಕೊಡಿಸಲು ಸಂಶೋಧನೆ ನಡೆಸುತ್ತಿರುವ ಜರ್ಮನಿಯ ವಿಜ್ಞಾನಿಗಳು ಸೊಳ್ಳೆಗಳು ಮತ್ತು ಇತರ ಕೀಟಗಳನ್ನು ದೂರ ಓಡಿಸುವಂತಹ ಹೊಸ 3ಡಿ ಮುದ್ರಿತ ಉಂಗುರವನ್ನು ಅಭಿವೃದ್ಧಿಪಡಿಸಿದ್ದಾರೆ.

ವ್ಯಕ್ತಿಯ ಇಷ್ಟದ ಆಕಾರದಲ್ಲಿಕೀಟ ನಿವಾರಕ ರಾಸಾಯನಿಕವನ್ನು ಈ ಉಂಗುರದಲ್ಲಿ ಅಳವಡಿಸಬಹುದಾಗಿದೆ. ವ್ಯಕ್ತಿ ಈ ಉಂಗುರ ಧರಿಸಿದಾಗ ಕೀಟ ನಿವಾರಕ ರಾಸಾಯನಿಕ ಬಿಡುಗಡೆಯಾಗಿ ಸೊಳ್ಳೆ, ಕೀಟಗಳನ್ನು ದೂರಕ್ಕೆ ಓಡಿಸುತ್ತದೆ.ಈ ಸಂಶೋಧನಾ ವರದಿಯು ಔಷಧಗಳ ಬಗೆಗಿನ ಅಂತರರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಜರ್ಮನಿಯ ಮಾರ್ಟಿನ್ ಲೂಥರ್ ವಿಶ್ವವಿದ್ಯಾಲಯದ ಹ್ಯಾಲೆ-ವಿಟ್ಟನ್ ಬರ್ಗ್‌ನ (ಎಂಎಲ್‌ಯು) ಸಂಶೋಧಕರು ಸಾಮಾನ್ಯ ಕೀಟ ನಿವಾರಕ ‘ಐಆರ್‌3535’ ಬಳಸಿ, ಈ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ.

ADVERTISEMENT

‘ಐಆರ್ 3535 ಹೊಂದಿರುವ ಸೊಳ್ಳೆ ನಿವಾರಕ ದ್ರವ್ಯವುಚರ್ಮಕ್ಕೆ ಯಾವುದೇ ಹಾನಿಮಾಡುವುದಿಲ್ಲ. ತುಂಬಾ ಸೌಮ್ಯವಾದ ಈ ದ್ರವ್ಯವು ವಿಶ್ವದಾದ್ಯಂತ ಹಲವು ವರ್ಷಗಳಿಂದ ಬಳಕೆಯಲ್ಲಿದೆ. ಇದನ್ನು ದೇಹದ ಮೇಲೆ ದ್ರವ್ಯ ರೂಪದಲ್ಲಿ ಸಿಂಪಡಿಸಿಕೊಂಡರೆ ಅಥವಾ ಲೋಷನ್‌ ಆಗಿ ಚರ್ಮಕ್ಕೆ ಲೇಪಿಸಿಕೊಂಡರೆ ಹಲವಾರು ಘಂಟೆಗಳವರೆಗೆ ಸೊಳ್ಳೆ, ಕೀಟಗಳ ಕಡಿತದಿಂದ ರಕ್ಷಣೆ ನೀಡುತ್ತದೆ. ಹಾಗಾಗಿಯೇ ನಮ್ಮ ಪ್ರಯೋಗಗಳಲ್ಲಿ ಈ ಕೀಟ ನಿವಾರಕವನ್ನು ಬಳಸುತ್ತಿದ್ದೇವೆ’ ಎಂದು ಎಂಎಲ್‌ಯುನ ಪ್ರೊಫೆಸರ್ ರೆನೆ ಆಂಡ್ರೊಷ್ ಹೇಳಿದರು.

‘ನಮ್ಮ ಸಂಶೋಧನಾ ತಂಡವು ಕೀಟ ನಿವಾರಕವನ್ನು ಜೈವಿಕ ವಿಘಟನೆಯ ಪಾಲಿಮರ್ ಆಗಿ ಮತ್ತು ವಿವಿಧ ರೀತಿಯಲ್ಲಿ ವಸ್ತುಗಳ ಜತೆಗೆ ಮಿಶ್ರಣಗೊಳಿಸಿ ಮಾದರಿ ರೂಪಿಸಲು ವಿಶೇಷ 3ಡಿ ಮುದ್ರಣ ತಂತ್ರಜ್ಞಾನ ಬಳಸಿದೆ. ಈ ಕೀಟ ನಿವಾರಕವು ನಿರಂತರ ಆವಿಯಾಗಿ, ಕೀಟಗಳು ಹತ್ತಿರ ಸುಳಿಯದಂತೆ ತಡೆಯುತ್ತದೆ’ ಎಂದು ಅಧ್ಯಯನದ ಪ್ರಮುಖ ಲೇಖಕ, ಎಂಎಲ್ ಯುನಲ್ಲಿ ಸಂಶೋಧನೆಯಲ್ಲಿ ತೊಡಗಿರುವ ಫ್ಯಾನ್ಫಾನ್ ಡು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.