ನವದೆಹಲಿ: ಅಮೆರಿಕ ಮೂಲದ ಜೇನ್ ಸ್ಟ್ರೀಟ್ ಸಮೂಹವನ್ನು ಭಾರತ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸೆಕ್ಯೂರಿಟಿ ಮಾರುಕಟ್ಟೆಯಿಂದ ನಿರ್ಬಂಧಿಸಿದೆ.
ಷೇರು ಮಾರುಕಟ್ಟೆಯಲ್ಲಿ ಅಕ್ರಮವಾಗಿ ಹಣ ಗಳಿಸಿರುವ ಆರೋಪ ಜೇನ್ ಸಮೂಹದ ಮೇಲಿರುವುದರಿಂದ, ಅದರಲ್ಲಿ ಗಳಿಸಿದ ₹4,843 ಕೋಟಿಯನ್ನು ಮರುಪಾವತಿಸುವಂತೆಯೂ ಸೆಬಿ ಆದೇಶಿಸಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಹಣ ಮರುಪಾವತಿಗೆ ಸೆಬಿ ಸೂಚಿಸಿದೆ.
ತನಿಖೆ ಮುಂದುವರಿಯಲಿದ್ದು, ಜೇನ್ ಸಮೂಹದ ಜೆಎಸ್ಐ ಇನ್ವೆಸ್ಟ್‌ಮೆಂಟ್ಸ್, ಜೆಎಸ್‌ಐ2 ಇನ್ವೆಸ್ಟ್‌ಮೆಂಟ್ಸ್ ಪ್ರೈ.ಲಿ, ಜೇನ್ ಸ್ಟ್ರೀಟ್ ಸಿಂಗಾಪುರ್ ಪ್ರೈ.ಲಿ ಮತ್ತು ಜೇನ್ ಏಷಿಯಾ ಟ್ರೇಡಿಂಗ್ ಸೆಬಿಯ ಮುಂದಿನ ಆದೇಶದವರೆಗೆ ಷೇರು ವಹಿವಾಟು ನಡೆಸದಂತೆ ಮಧ್ಯಂತರ ಆದೇಶ ಹೊರಡಿಸಲಾಗಿದೆ.
ಷೇರು ವಹಿವಾಟು ಮೇಲೆ ಪ್ರಭಾವ ಬೀರಲು ಮತ್ತು ಉತ್ತಮ ಸ್ಥಾನವನ್ನು ಗಳಿಸಲು ಜೇನ್ ಸ್ಟ್ರೀಟ್ ಸಮೂಹವು 2023ರ ಜನವರಿಯಿಂದ 2025 ಮೇವರೆಗೆ ಟ್ರೇಡಿಂಗ್ ಮುಕ್ತಾಯದ 21 ದಿನಗಳಲ್ಲಿ (ಎಕ್ಸ್‌ಪೈರಿ ಡೇಸ್) ನಗದು ಮತ್ತು ದೊಡ್ಡ ಪ್ರಮಾಣದ ವಹಿವಾಟುಗಳನ್ನು ನಡೆಸಿರುವುದು ಸೆಬಿ ತನಿಖೆಯಿಂದ ಬಹಿರಂಗವಾಗಿದೆ.
ಜೇನ್ ಸ್ಟ್ರೀಟ್ ಮತ್ತು ಅದರ ಸಹ ಸಂಸ್ಥೆಗಳು ಷೇರುಮಾರುಕಟ್ಟೆ ವಹಿವಾಟಿನಲ್ಲಿ ಅನಧಿಕೃತ ತಂತ್ರಗಳನ್ನು ಬಳಸಿಕೊಂಡಿದ್ದಾವೆ ಎಂದು ಆರೋಪಿಸಿ 2024 ಏಪ್ರಿಲ್‌ನಲ್ಲಿ ಪ್ರಕಟವಾಗಿದ್ದ ಮಾಧ್ಯಮ ವರದಿಯ ಆಧಾರದಲ್ಲಿ ತನಿಖೆ ಆರಂಭಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.