ADVERTISEMENT

ಪಾಕಿಸ್ತಾನ: ಹಣ ಅಕ್ರಮ ವರ್ಗಾವಣೆ ಪ್ರಕರಣ-ಶಹಬಾಜ್‌, ಹಮ್ಜಾ ದೋಷಿ

ಪಿಟಿಐ
Published 11 ನವೆಂಬರ್ 2020, 11:22 IST
Last Updated 11 ನವೆಂಬರ್ 2020, 11:22 IST
ಶಹಬಾಜ್‌ ಷರೀಫ್‌
ಶಹಬಾಜ್‌ ಷರೀಫ್‌   

ಲಾಹೋರ್‌: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್‌–ನಮಾಜ್‌ (ಪಿಎಂಎಲ್‌–ಎನ್‌) ಪಕ್ಷದ ಅಧ್ಯಕ್ಷ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ಶಹಬಾಜ್‌ ಷರೀಫ್‌ ಮತ್ತು ಅವರ ಪುತ್ರ ಹಮ್ಜಾ, ದೋಷಿಗಳೆಂದು ಇಲ್ಲಿನ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಕಿರಿಯ ಸಹೋದರರಾಗಿರುವ ಶಹಬಾಜ್‌ ಹಾಗೂ ಪಂಜಾಬ್‌ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಹಮ್ಜಾ ವಿರುದ್ಧ ನ್ಯಾಷನಲ್‌ ಅಕೌಂಟಬಿಲಿಟಿ ಬ್ಯೂರೊ (ಎನ್‌ಎಬಿ) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ನ್ಯಾಯಾಧೀಶ ಜವಾದುಲ್‌ ಹಸನ್‌ ನೇತೃತ್ವದ ಪೀಠ ಇದರ ವಿಚಾರಣೆ ನಡೆಸಿತ್ತು.

ಶಹಬಾಜ್‌ ಮತ್ತು ಹಮ್ಜಾ,ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ.

ADVERTISEMENT

‘ಪ್ರಧಾನಿ ಇಮ್ರಾನ್‌ ಖಾನ್‌ ಅವರು ನನ್ನ ಮತ್ತು ನನ್ನ ಕುಟುಂಬದ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಲಾಹೋರ್‌ ಮೆಟ್ರೊ ರೈಲು ಯೋಜನೆಯಿಂದ ಕೋಟ್ಯಂತರ ಹಣ ಉಳಿತಾಯ ಮಾಡಿದ್ದೇನೆ. ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ. ಒಂದೇ ಒಂದು ರೂಪಾಯಿಯನ್ನೂ ಸ್ವಂತಕ್ಕೆ ಬಳಸಿಕೊಂಡಿಲ್ಲ. ಬದುಕಿರುವಾಗ ಇಲ್ಲವೇ ಸತ್ತಮೇಲೆ ನನ್ನ ಮೇಲಿನ ಆರೋಪ‍ ಸಾಬೀತಾದರೆ ಸಮಾಧಿಯಿಂದಲೇ ಶವವನ್ನು ಹೊರತೆಗೆದು ನೇಣಿಗೇರಿಸಿ’ ಎಂದು ಶಹಬಾಜ್‌, ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

‘ವಿರೋಧ ಪಕ್ಷದವರನ್ನು ಹಣಿಯುವುದಕ್ಕಾಗಿ ಎನ್‌ಎಬಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ನನಗೆ ತೀವ್ರ ಬೆನ್ನು ನೋವಿತ್ತು. ಇದು ಗೊತ್ತಿದ್ದರೂ ಜೈಲು ಅಧಿಕಾರಿಗಳು ಶಸ್ತ್ರಸಜ್ಜಿತ ಕಾರಿನಲ್ಲಿ ಕರೆದುಕೊಂಡು ಬಂದಿದ್ದಾರೆ. ನಾನು ನೋವು ಅನುಭವಿಸುವುದನ್ನು ನೋಡಿ ಅವರು ಆನಂದಪಡುತ್ತಿದ್ದಾರೆ’ ಎಂದೂ ಅವರು ಹೇಳಿದರು.

ನವೆಂಬರ್‌ 26ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯವು, ಈ ವೇಳೆ ಸಾಕ್ಷಿಗಳನ್ನು ಹಾಜರುಪಡಿಸುವಂತೆ ಎನ್‌ಎಬಿಗೆ ಸೂಚಿಸಿತು.

ಈ ವರ್ಷದ ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಎನ್‌ಎಬಿ ಅಧಿಕಾರಿಗಳು ಶಹಬಾಜ್‌ ಅವರನ್ನು ಬಂಧಿಸಿ ಕೋಟ್‌ ಲಖಪತ್‌ ಜೈಲಿಗೆ ಕಳುಹಿಸಿದ್ದರು. ಹಮ್ಜಾ ಕೂಡ ಇದೇ ಜೈಲಿನಲ್ಲಿದ್ದರು.

2008 ರಿಂದ 2018ರ ಅವಧಿಯಲ್ಲಿ ಶಹಬಾಜ್‌ ಅವರ ಆಸ್ತಿ ದುಪ್ಪಟ್ಟಾಗಿದೆ. ಲಂಡನ್‌ನಲ್ಲಿ ಅವರು ನಾಲ್ಕು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ. ಆದರೆ ಈ ಕುರಿತು ನಮಗೆ ಸರಿಯಾದ ಮಾಹಿತಿಯನ್ನೇ ನೀಡಿಲ್ಲ ಎಂದು ಎನ್‌ಎಬಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.