ಬಂಧನ
ಕೊಲಂಬೊ: ಶ್ರೀಲಂಕಾ ರಾಜಕಾರಣದಲ್ಲಿನ ಪ್ರತಿಷ್ಠಿತ ರಾಜಪಕ್ಸ ಕುಟುಂಬದ ಕುಡಿ, ಮಾಜಿ ಸಚಿವ ಶಶೀಂದ್ರ ರಾಜಪಕ್ಸ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬುಧವಾರ ಬಂಧಿಸಲಾಗಿದೆ.
ಆಡಳಿತಾರೂಢ ಎನ್‌ಪಿಪಿ ಸರ್ಕಾರದ ಭ್ರಷ್ಟಾಚಾರ ವಿರೋಧಿ ಹೋರಾಟದಡಿ ಬಂಧನಕ್ಕೊಳಗಾದ ರಾಜಪಕ್ಸ ಕುಟುಂಬದ ಮೊದಲ ವ್ಯಕ್ತಿ ಶಶೀಂದ್ರ.
ದ್ವೀಪ ರಾಷ್ಟ್ರದ ಆಗ್ನೇಯ ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ ಜಮೀನನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಶಶೀಂದ್ರ ವಿರುದ್ಧ ಕೇಳಿಬಂದಿದೆ.
‘ಅಕ್ರಮ ನಿರ್ಮಾಣದಲ್ಲೂ ಭಾಗಿಯಾಗಿರುವ ಆರೋಪ ಹೊತ್ತಿರುವ ಶಶೀಂದ್ರ, 2022ರ ಮೇ ತಿಂಗಳಿನಲ್ಲಿ ಸಾರ್ವಜನಿಕರು ನಡೆಸಿದ ಪ್ರತಿಭಟನೆ ಸಂದರ್ಭ ಬೆಂಕಿಗಾಹುತಿಯಾದ ಸರ್ಕಾರಿ ಸ್ವತ್ತಿಗೂ ತಮ್ಮ ಪ್ರಭಾವ ಬಳಸಿಕೊಂಡು ಪರಿಹಾರ ಪಡೆದಿದ್ದಾರೆ. ಸರ್ಕಾರಿ ಅಧಿಕಾರಿಗಳು ಪರಿಹಾರ ಪಾವತಿಗೆ ಹಿಂಜರಿದರೂ, ಇದು ಸಂಭವಿಸಿದೆ’ ಎಂದು ದೂರಲಾಗಿದೆ.
ರಾಜಪಕ್ಸ ಸಹೋದರರಲ್ಲಿ ಹಿರಿಯರಾದ ಚಮಲ್ ರಾಜಪಕ್ಸ ಅವರ ಪುತ್ರ ಶಶೀಂದ್ರ ಅವರನ್ನು ಭ್ರಷ್ಟಾಚಾರ ನಿಗ್ರಹ ಆಯೋಗ ಬಂಧಿಸಿ ಕೊಲಂಬೊ ಚೀಫ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ನ್ಯಾಯಾಲಯವು ಆಗಸ್ಟ್ 19ರವರೆಗೂ ಕಸ್ಟಡಿಗೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.