ADVERTISEMENT

ನವಾಜ್ ಷರೀಫ್ ಸಹೋದರ ಶೆಹಬಾಜ್ ಪಾಕಿಸ್ತಾನದ ನೂತನ ಪ್ರಧಾನಿ?

ಪಿಟಿಐ
Published 14 ಫೆಬ್ರುವರಿ 2024, 7:21 IST
Last Updated 14 ಫೆಬ್ರುವರಿ 2024, 7:21 IST
<div class="paragraphs"><p>ಶೆಹಬಾಜ್</p></div>

ಶೆಹಬಾಜ್

   

ರಾಯಿಟರ್ಸ್ ಚಿತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರ ಶೆಹಬಾಜ್ ಷರೀಫ್ ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ರಾಷ್ಟ್ರೀಯ ಸಂಸತ್ತಿನ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಷರೀಫ್ ಸಹೋದರರ ನೇತೃತ್ವದ ಮೈತ್ರಿಕೂಟವು ಸರಳ ಬಹುಮತ ಪಡೆಯುವಲ್ಲಿ ಯಶಸ್ಸು ಕಂಡಿದೆ ಎಂದು ವರದಿಗಳು ತಿಳಿಸಿವೆ.

ADVERTISEMENT

ಮಂಗಳವಾರ ರಾತ್ರಿಯ ಅಚ್ಚರಿ ಬೆಳವಣಿಗೆಯಲ್ಲಿ ಮೂರು ಬಾರಿಯ ಪ್ರಧಾನಿ ನವಾಜ್ ಷರೀಫ್ ಅವರನ್ನು ಬಿಟ್ಟು ಅವರ ಸಹೋದರ ಶೆಹಬಾಜ್ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಪಾಕಿಸ್ತಾನದ ಮುಸ್ಲಿಂ ಲೀಗ್–ನವಾಜ್(ಪಿಎಂಎಲ್‌–ಎನ್) ಪಕ್ಷವು ಆಯ್ಕೆ ಮಾಡಿದೆ.

ಪಾಕಿಸ್ತಾನದ ಮುಸ್ಲಿಂ ಲೀಗ್–ಕ್ವೈಡ್(ಪಿಎಂಎಲ್‌–ಕ್ಯೂ) ಪಕ್ಷದ ಶುಜಾತ್ ಹುಸೇನ್ ನಿವಾಸದಲ್ಲಿ ಶೆಹಬಾಜ್ ಮತ್ತು ಪಾಕಿಸ್ತಾನ ಪೀಪಲ್ಸ್ ಪಕ್ಷದ ಆಸಿಫ್ ಅಲಿ ಜರ್ದಾರಿ ಹಾಗೂ ಎಂಕ್ಯೂಎಂ ಪಕ್ಷದ ಖಾಲಿದ್ ಮಕ್ಬೂಲ್ ಸಿದ್ಧಿಕಿ ಸಭೆ ಸೇರಿ ಮೈತ್ರಿ ಸರ್ಕಾರ ರಚನೆಯ ತೀರ್ಮಾನಕ್ಕೆ ಬಂದಿದ್ದಾರೆ.

‘ಅತಂತ್ರ ಫಲಿತಾಂಶನ್ನು ನಾವು ಒಪ್ಪಿಕೊಂಡಿದ್ದೇವೆ ಎಂಬುದನ್ನು ದೇಶಕ್ಕೆ ತಿಳಿಸಲು ನಾವು ಒಟ್ಟಾಗಿದ್ದೇವೆ. ಪಿಎಂಎಲ್‌–ಎನ್ ಪಕ್ಷಕ್ಕೆ ಬೆಂಬಲ ನೀಡಲು ನಿರ್ಧರಿಸಿದ ಜರ್ದಾರಿ ಮತ್ತು ಬಿಲಾವಲ್‌ಗೆ ನನ್ನ ಧನ್ಯವಾದ’ ಎಂದು ಶೆಹಬಾಜ್ ಹೇಳಿದ್ದಾರೆ.

ಪಕ್ಷದ ಅಧ್ಯಕ್ಷ ಮತ್ತು ಅವರ ಕಿರಿಯ ಸಹೋದರ ಶೆಹಬಾಜ್ ಷರೀಫ್ ಅವರ ಹೆಸರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ನವಾಜ್ ಷರೀಫ್ ಅವರೇ ಸೂಚಿಸಿದರು ಎಂದು ಪಕ್ಷದ ಮಾಹಿತಿ ಕಾರ್ಯದರ್ಶಿ ಮರಿಯುಂ ಔರಂಗಜೇಬ್ ತಿಳಿಸಿದ್ದಾರೆ.

ಇದೇವೇಳೆ, ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಹುದ್ದೆಗೆ ಪಕ್ಷದ ಉಪಾಧ್ಯಕ್ಷರಾದ ಮಾರ್ಯಮ್ ನವಾಜ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.