ADVERTISEMENT

ಕಂಟೇನರ್‌ಗಳಿಗೆ ಬೆಂಕಿ: ಬಂದರು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 16:59 IST
Last Updated 7 ಫೆಬ್ರುವರಿ 2023, 16:59 IST
   

ಇಸ್ಕೆಂದೆರುನ್‌ (ಟರ್ಕಿ): ಟರ್ಕಿಯ ಇಸ್ಕೆಂದೆರುನ್‌ ವ್ಯಾಪ್ತಿಯ ಲಿಮಾಕ್‌ ಬಂದರಿನಲ್ಲಿ ನೂರಾರು ಹಡಗು ಕಂಟೇನರ್‌ಗಳಿಗೆ ಸೋಮವಾರ ಸಂಜೆ ಬೆಂಕಿ ಹೊತ್ತಿದ್ದು, ಬಂದರಿನ ಕಾರ್ಯಾಚರಣೆಯನ್ನು ಮಂಗಳವಾರ ಸ್ಥಗಿತಗೊಳಿಸಲಾಯಿತು. ಸರಕುಸಾಗಣೆ ಹಡಗುಗಳನ್ನು ಬೇರೆ ಬಂದರುಗಳಿಗೆ ಕಳುಹಿಸಲಾಯಿತು.

ಭೂಕಂಪದಿಂದ ದಕ್ಷಿಣ ಪ್ರಾಂತ್ಯದ ಹತಾಯ್‌ನ ಮೆಡಿಟರೇನಿಯನ್ ಕರಾವಳಿಯ ಲಿಮಾಕ್‌ ಬಂದರು ಕೂಡ ಹಾನಿಗೀಡಾಗಿದೆ ಎಂದು ಟರ್ಕಿ ಸಾಗರ ಪ್ರಾಧಿಕಾರ ತಿಳಿಸಿದೆ.

ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳಲ್ಲಿ ಹಡಗುಕಟ್ಟೆಯಲ್ಲಿ ನೂರಾರು ಕಂಟೇನರ್‌ಗಳಿಗೆ ಬೆಂಕಿ ತಗುಲಿ, ದಟ್ಟ ಹೊಗೆ ಮುಗಿಲೆತ್ತರ ಆವರಿಸಿದೆ. ಭುಗಿಲೆದ್ದ ಬೆಂಕಿಯ ಜ್ವಾಲೆಯ ರಭಸವನ್ನು ಅಗ್ನಿಶಾಮಕ ವಾಹನಗಳಿಂದ ನೀರು ಎರಚಿ ತಗ್ಗಿಸಲಾಗಿದೆ.

ADVERTISEMENT

ಕಂಟೇನರ್‌ಗಳು ಉರುಳಿದಾಗ ಹೊತ್ತಿದ ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಕಂಟೇನರ್‌ಗಳಲ್ಲಿದ್ದ ಕೈಗಾರಿಕೆಯಲ್ಲಿ ಬಳಸುವ ಎಣ್ಣೆ ಕಂಟೇನರ್‌ಗಳು ಉರುಳಿದಾಗ ಹೊರಬಂದು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಮೂಲವೊಂದು ಹೇಳಿದೆ.

ಬಂದರಿನ ಕೆಲವು ಸರಕು ಸಾಗಣೆ ಸ್ಥಳಗಳಲ್ಲಿ ಬೆಂಕಿ ಇನ್ನೂ ಇದೆ. ಮುಂದಿನ ಸೂಚನೆ ಬರುವವರೆಗೂ ಕಾರ್ಗೊ ಟರ್ಮಿನಲ್ ಮುಚ್ಚಲಾಗಿದೆ ಎಂದು ಟರ್ಕಿ ಹಡಗು ಏಜೆನ್ಸಿ ಟ್ರಿಬಿಕಾ ಮಂಗಳವಾರ ಹೇಳಿದೆ.

ಲಿಮಾಕ್‌ ಬಂದರು ಸೇರಿ, ಭೂಕಂಪದ ಕೇಂದ್ರಬಿಂದುವಿನ ಸುತ್ತ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ಮೂಲಸೌಕರ್ಯಗಳಿಗೆ ಅಪಾರ ಹಾನಿಯಾಗಿದೆ ಎಂದು ಪ್ರಮುಖ ಜಾಗತಿಕ ಕಂಟೇನರ್‌ ಶಿಪ್ಪಿಂಗ್ ಸಮೂಹ ಎಪಿ ಮೊಲ್ಲರ್ ಮಾರ್ಸ್ಕ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.