ADVERTISEMENT

ನಾಪತ್ತೆಯಾಗಿರುವ ಜಲಾಂತರ್ಗಾಮಿ ಹುಡುಕಾಟಕ್ಕೆ ವಿಮಾನ, ಹಡಗು, ಸೋನಾರ್‌ ಸಾಧನಗಳ ಬಳಕೆ

ರಾಯಿಟರ್ಸ್‌
Published 20 ಜೂನ್ 2023, 12:53 IST
Last Updated 20 ಜೂನ್ 2023, 12:53 IST
ಟೈಟಾನಿಕ್‌ ಹಡಗಿನ ವೀಕ್ಷಣೆಗೆಂದು ತೆರಳಿದ ಸಬ್‌ಮರ್ಸಿಬಲ್‌ನ ಕೊನೇ ಚಿತ್ರ
ಟೈಟಾನಿಕ್‌ ಹಡಗಿನ ವೀಕ್ಷಣೆಗೆಂದು ತೆರಳಿದ ಸಬ್‌ಮರ್ಸಿಬಲ್‌ನ ಕೊನೇ ಚಿತ್ರ   

ವಾಷಿಂಗ್ಟನ್‌: ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲೆಂದು ಪ್ರವಾಸಿಗರನ್ನು ಕರೆದೊಯ್ಯುವಾಗ ಸಾಗರದಲ್ಲಿ ನಾಪತ್ತೆಯಾಗಿರುವ ಸಬ್‌ಮಾರ್ಸಿಬಲ್‌ (ಸೀಮಿತ ಪ್ರದೇಶದಲ್ಲಿ ಸಂಚರಿಸುವ ಸಣ್ಣ ಜಲಾಂತರ್ಗಾಮಿ)ಗಾಗಿ ಅಮೆರಿಕ ಮತ್ತು ಕೆನಡಾದ ಹಡಗುಗಳು ಮತ್ತು ವಿಮಾನಗಳು ಹುಡುಕಾಟ ನಡೆಸಿವೆ.

ಸಬ್‌ಮಾರ್ಸಿಬಲ್‌ನಲ್ಲಿ ಒಬ್ಬ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರಿದ್ದರು. 96 ಗಂಟೆ ಸಾಗರದಲ್ಲಿ ಸಂಚರಿಸುವಷ್ಟು ಶಕ್ತಿ, ಆಮ್ಲಜನಕವನ್ನು ಅದು ಹೊಂದಿತ್ತು ಎಂದು ಅಮೆರಿಕದ ಕರಾವಳಿ ಕಾವಲು ಪಡೆ ಹೇಳಿದೆ. ಸಬ್‌ಮಾರ್ಸಿಬಲ್‌ನೊಂದಿಗೆ ಸಂವಹನ ಸಾಧ್ಯವಾಗದ ಹಿನ್ನೆಲೆಯಲ್ಲಿ, ಅದು ಕಡಲಾಳದಲ್ಲಿ ಸಿಲುಕಿದೆಯೇ ಅಥವಾ ಮೇಲೆ ಬಂದಿದೆಯೇ ಎಂಬುದನ್ನು ತಿಳಿಯಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕ ಮತ್ತು ಕೆನಡಾದ ಹಡಗುಗಳು ಮತ್ತು ವಿಮಾನಗಳು ಅಮೆರಿಕದ ಕರಾವಳಿ ಕೇಪ್ ಕಾಡ್‌ನ ಪೂರ್ವಕ್ಕೆ ಸುಮಾರು 1,450 ಕಿ.ಮೀ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿವೆ. ಸೋನಾರ್ ಸಾಧನಗಳ ಮೂಲಕ 13,000 ಅಡಿ (3,962 ಮೀಟರ್) ಆಳದವರೆಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಮೆರಿಕದ ಕರಾವಳಿ ಕಾವಲು ಪಡೆಯ ಅಡ್ಮಿರಲ್ ಜಾನ್ ಮೌಗರ್ ತಿಳಿಸಿದರು.

ADVERTISEMENT

‘ದೂರದ ಪ್ರದೇಶದಲ್ಲಿ ಸಬ್‌ಮಾರ್ಸಿಬಲ್‌ ಕಣ್ಮರೆಯಾಗಿದೆ. ಈ ಪ್ರದೇಶದಲ್ಲಿ ಹುಡುಕಾಟ ನಡೆಸುವುದೇ ಒಂದು ಸವಾಲು’ ಎಂದು ಮೌಗರ್ ಹೇಳಿದರು.

ಸಬ್‌ಮಾರ್ಸಿಬಲ್‌ನಲ್ಲಿರುವವರ ರಕ್ಷಣೆಗಾಗಿ ಇರುವ ಎಲ್ಲ ಆಯ್ಕೆಗಳನ್ನೂ ಮುಕ್ತವಾಗಿಟ್ಟಿರುವುದಾಗಿ ಸಬ್‌ಮಾರ್ಸಿಬಲ್‌ನ ನಿರ್ವಹಣಾ ಸಂಸ್ಥೆ ‘ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್’ ಸೋಮವಾರದ ಹೇಳಿಕೆಯಲ್ಲಿ ತಿಳಿಸಿದೆ.

ಬ್ರಿಟಿಷ್‌ ಉದ್ಯಮಿ ಹಮೀಶ್ ಹಾರ್ಡಿಂಗ್, ಪಾಕಿಸ್ತಾನಿ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ಕೂಡ ಸಬ್‌ಮಾರ್ಸಿಬಲ್‌ನಲ್ಲಿ ಇದ್ದರು ಎಂದು ಎರಡೂ ಕುಟುಂಬಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.