ADVERTISEMENT

ಸಿಖ್ ಅಮೆರಿಕನ್ನರಿಂದ ಪ್ರತಿಭಟನೆ, ತವರಿನಲ್ಲಿನ ರೈತರ ಹೋರಾಟಕ್ಕೆ ಬೆಂಬಲ

ಪಿಟಿಐ
Published 6 ಡಿಸೆಂಬರ್ 2020, 19:31 IST
Last Updated 6 ಡಿಸೆಂಬರ್ 2020, 19:31 IST
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಲಂಡನ್‌ನಲ್ಲಿ ಸಿಖ್‌ ಸಮುದಾಯದವರು ಭಾನುವಾರ ಪ್ರತಿಭಟನೆ ನಡೆಸಿದರು  –ರಾಯಿಟರ್ಸ್‌ ಚಿತ್ರ
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಲಂಡನ್‌ನಲ್ಲಿ ಸಿಖ್‌ ಸಮುದಾಯದವರು ಭಾನುವಾರ ಪ್ರತಿಭಟನೆ ನಡೆಸಿದರು  –ರಾಯಿಟರ್ಸ್‌ ಚಿತ್ರ   

ವಾಷಿಂಗ್ಟನ್: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಅಮೆರಿಕದ ವಿವಿಧ ನಗರಗಳಲ್ಲಿ ನೂರಾರು ಸಿಖ್‌ ಧರ್ಮೀಯರು ಶಾಂತಿಯುತ ಪ್ರತಿಭಟನೆ ನಡೆಸಿದರು.

ಕ್ಯಾಲಿಫೋರ್ನಿಯಾದ ವಿವಿಧ ಭಾಗಗಳಿಂದ ಬಂದಿದ್ದ ಪ್ರತಿಭಟನಾಕಾರರು ಸ್ಯಾನ್‌ ಫ್ರಾನ್ಸಿಸ್ಕೊದ ಭಾರತೀಯ ಕಾನ್ಸುಲೇಟ್‌ಗೆ ತೆರಳುವ ಮಾರ್ಗದಲ್ಲಿ ಬೇ ಬ್ರಿಡ್ಜ್‌ನಲ್ಲಿ ಸಂಚಾರಕ್ಕೆ ತಡೆ ಒಡ್ಡಿದರು. ಜಕಾರಾ ಮೂವ್‌ಮೆಂಟ್ ಸಂಘಟನೆಯು ಇಲ್ಲಿ ಪ್ರತಿಭಟನೆ ಆಯೋಜಿಸಿತ್ತು.

ನೂರಾರು ಜನರು ಇಂಡಿಯಾನಪೊಲೀಸ್‌ನ ಡೌನ್‌ಟೌನ್‌ನಲ್ಲಿ ಜಮಾವಣೆಯಾಗಿದ್ದರು. ಗುರಿಂದರ್ ಸಿಂಗ್ ಖಲ್ಸಾ ಎಂಬುವರು ಇಲ್ಲಿ ರ‍್ಯಾಲಿ ಆಯೋಜಿಸಿದ್ದರು. ಹ್ಯೂಸ್ಟನ್, ಮಿಚಿಗನ್, ನ್ಯೂಯಾರ್ಕ್‌ನಲ್ಲೂ ಪ್ರತಿಭಟನೆ ನಡೆದ ವರದಿಯಾಗಿದೆ. ‘ರೈತರನ್ನು ರಕ್ಷಿಸಿ’ ಎಂಬ ರೀತಿಯ ಬರಹವುಳ್ಳ ಫಲಕಗಳನ್ನು ಪ್ರದರ್ಶಿಸಲಾಯಿತು. ಕೃಷಿ ಕಾಯ್ದೆಗಳು ಭಾರತದ ರೈತರನ್ನು ಬಡತನಕ್ಕೆ ತಳ್ಳಿವೆ ಎಂದು ಪ್ರತಿಭಟನಕಾರರು ಪ್ರತಿಪಾದಿಸಿದರು.

ADVERTISEMENT

ಇದಕ್ಕೂ ಮುನ್ನ ಷಿಕಾಗೊದ ಸಿಖ್ ಅಮೆರಿಕನ್ನರು ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ದೂತಾ
ವಾಸ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಇಲ್ಲಿ ಭಾನುವಾರ ಮತ್ತೊಂದು ರ್‍ಯಾಲಿ ನಿಗದಿಯಾಗಿತ್ತು. ಲಂಡನ್‌ನಲ್ಲೂ ಸಿಖ್‌ ಸಮುದಾಯದವರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

ರಾಷ್ಟ್ರಪತಿ ಭೇಟಿಯಾಗಲಿರುವ ಪವಾರ್

(ಮುಂಬೈ ವರದಿ): ಎರಡು ಬಾರಿ ಕೇಂದ್ರ ಕೃಷಿ ಸಚಿವರಾಗಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಬುಧವಾರ ಭೇಟಿ ಮಾಡುವ ನಿರೀಕ್ಷೆಯಿದೆ. ‘ಪ್ರತಿಪಕ್ಷಗಳ ಮಾತು ಕೇಳದೇ ತರಾತುರಿಯಲ್ಲಿ ಕೃಷಿ ಮಸೂದೆಗಳಿಗೆ ಸರ್ಕಾರ ಅನುಮೋದನೆ ಪಡೆಯಿತು. ಆಯ್ಕೆ ಸಮಿತಿಗೆ ಮಸೂದೆಗಳನ್ನು ನೀಡಬೇಕಿತ್ತು. ಇದು ಮುಂದೆ ಸಮಸ್ಯೆ ತಂದೊಡ್ಡುತ್ತದೆ ಎಂದು ನಾವು ಹೇಳಿದರೂ ಸರ್ಕಾರ ಕೇಳಿಸಿಕೊಳ್ಳವ ಸ್ಥಿತಿಯಲ್ಲಿ ಇರಲಿಲ್ಲ. ಈಗ ಸಮಸ್ಯೆ ಎದುರಿಸುವಂತಾಗಿದೆ’ ಎಂದು ಪವಾರ್ ಅಭಿಪ್ರಾಯಪಟ್ಟಿದ್ದಾರೆ.

‘ಪಂಜಾಬ್ ಮತ್ತು ಹರಿಯಾಣ ಭಾಗದ ರೈತರು ದೇಶದ ಕೃಷಿ ಹಾಗೂ ಆಹಾರ ಪೂರೈಕೆಗೆ ದೊಡ್ಡ ಕೊಡುಗೆ ನೀಡುತ್ತಿ
ದ್ದಾರೆ. ಅವರು ಕೇವಲ ಜನರ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ಆಹಾರ ಸರಪಳಿಗೆ ಕೊಡುಗೆ ನೀಡುತ್ತಿದ್ದಾರೆ’ ಎಂದು ಪವಾರ್ ಹೇಳಿದ್ದಾರೆ.

ರೈತರ ಸಾವುಬದುಕಿನ ಹೋರಾಟದಲ್ಲಿ ಪಕ್ಷ ಎಂದಿಗೂ ಇರಲಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ಹೇಳಿದ್ಧಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ಪ್ರತಿಭಟನೆಯಲ್ಲಿ ರೈತರ ಪರ ನಿಲ್ಲುವುದಾಗಿ ಘೋಷಿಸಿದ್ದಾರೆ. ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರೈತರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

***

ಸರ್ಕಾರವು ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ, ಪ್ರತಿಭಟನೆಯು ದೇಶದ ಮೂಲೆಮೂಲೆಗೆ ವಿಸ್ತರಿಸುವ ಸಾಧ್ಯತೆಯಿದೆ

- ಶರದ್ ಪವಾರ್, ಎನ್‌ಸಿಪಿ ಅಧ್ಯಕ್ಷ

***

ರೈತರು ಯಾವುದೇ ರಾಷ್ಟ್ರದ ಆತ್ಮ. ನಾವು ನಮ್ಮ ಆತ್ಮ ರಕ್ಷಿಸಬೇಕಿದೆ. ಅಮೆರಿಕ, ಕೆನಡಾ ಸೇರಿ ವಿಶ್ವದ ಭಾರತೀಯ ಸಮುದಾಯಗಳು ಕಾಯ್ದೆ ವಿರೋಧಿಸುತ್ತಿವೆ

- ಗುರಿಂದರ್ ಸಿಂಗ್ ಖಲ್ಸಾ, ರ‍್ಯಾಲಿ ಆಯೋಜಕ

***

ಪ್ರತಿಪಕ್ಷಗಳಿಗೆ ಬಿಜೆಪಿ ತರಾಟೆ

ಭಾರತ್ ಬಂದ್ ಬೆಂಬಲಿಸಿರುವ ಪ್ರತಿಪಕ್ಷಗಳನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ‘ಕೃಷಿ ಕ್ಷೇತ್ರದಲ್ಲಿ ಸುಧಾರಣೆಗೆ ಒತ್ತಾಯಿಸಿದ್ದ ಎನ್‌ಸಿಪಿ, ಡಿಎಂಕೆ ಹಾಗೂ ರೈತ ಸಂಘಗಳು ಇದೀಗ ವಿರೋಧಿಸುತ್ತಿವೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಟೀಕಿಸಿದ್ದಾರೆ.
‘ಕೃಷಿ ಕ್ಷೇತ್ರದಲ್ಲಿ ಪರ್ಯಾಯ ಸ್ಪರ್ಧಾತ್ಮಕ ಮಾರುಕಟ್ಟೆಯ ಮಾರ್ಗ ತೆರೆಯಲು ಖಾಸಗಿ ಭಾಗವಹಿಸುವಿಕೆಯನ್ನು ಶರದ್ ಪವಾರ್ 2010ರಲ್ಲಿ ಪ್ರತಿಪಾದಿಸಿದ್ದರು. 2016ರ ಪ್ರಣಾಳಿಕೆಯಲ್ಲಿ ಕೃಷಿ ಉತ್ಪನ್ನಗಳ ಮುಕ್ತ ಮಾರಾಟವನ್ನು ಡಿಎಂಕೆ ಪ್ರಸ್ತಾಪಿಸಿತ್ತು. ಕೃಷಿ ಮಾರುಕಟ್ಟೆಯಲ್ಲಿ ಕಾರ್ಪೊರೇಟ್ ಸಹಭಾಗಿತ್ವಕ್ಕೆ ಆಗ್ರಹಿಸಿ ಪಂಜಾಬ್ ಮತ್ತು ಹರಿಯಾಣ ರೈತರು ಪ್ರತಿಭಟನೆ ನಡೆಸಿದ್ದರು. ಈಗ ವಿರೋಧಿಸುತ್ತಿರುವುದು ಕಪಟತನದ ಪರಮಾವಧಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.