ರಾಜಕುಮಾರ ಅಲ್-ವಲೀದ್
(ಚಿತ್ರ–@allah_cure_dede )
ರಿಯಾದ್: 20 ವರ್ಷಗಳ ಕಾಲ ಕೋಮಾದಲ್ಲಿದ್ದ, 'ಸ್ಲೀಪಿಂಗ್ ಪ್ರಿನ್ಸ್' ಎಂದೇ ಹೆಸರಾಗಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಲ್-ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ (36) ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ದೃಢಪಡಿಸಿವೆ.
ಈ ಬಗ್ಗೆ 'ಎನ್‌ಡಿಟಿವಿ' ವರದಿ ಮಾಡಿದೆ.
ರಾಜಕುಮಾರ ಅಲ್-ವಲೀದ್ ಶನಿವಾರ ನಿಧನರಾಗಿದ್ದಾರೆ. ಇಂದು (ಭಾನುವಾರ) ರಿಯಾದ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಂದೆ ಪ್ರಿನ್ಸ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ತಿಳಿಸಿದ್ದಾರೆ.
ಗೌರವ ಸೂಚಕವಾಗಿ ಮುಂದಿನ ಮೂರು ದಿನಗಳ ಕಾಲ ( ಭಾನುವಾರ, ಸೋಮವಾರ ಮತ್ತು ಮಂಗಳವಾರ) - ಸಂತಾಪ ಸಭೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಮಗನ ಮೇಲೆ ಅಪಾರ ಪ್ರೀತಿ ಹೊಂದಿದ್ದ ಪ್ರಿನ್ಸ್ ಖಾಲಿದ್, ಅವನ ಬದುಕು– ಸಾವು ದೇವರಿಚ್ಛೆ ಎಂದು ಹಿಂದೆ ಹಲವು ಬಾರಿ ಹೇಳಿಕೊಂಡಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಭಾವುಕ ಪೋಸ್ಟ್ ಮಾಡಿರುವ ಅವರು, ದೇವರ ಚಿತ್ತ ಮತ್ತು ಆಜ್ಞೆ. ನಮ್ಮ ಪ್ರೀತಿಯ ಪುತ್ರ, ರಾಜಕುಮಾರ ಅಲ್-ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ ನಿಧನಕ್ಕೆ ನಾವು ತೀವ್ರ ಶೋಕಿಸುತ್ತೇವೆ. ಸರ್ವಶಕ್ತನಾದ ಅಲ್ಲಾಹನು ಅವರಿಗೆ ಸ್ವರ್ಗದಲ್ಲಿ ಸ್ಥಾನ ನೀಡಲಿ. ಕುಟುಂಬಸ್ಥರು ಮತ್ತು ಪ್ರೀತಿಪಾತ್ರರಿಗೆ ಸಾಂತ್ವನ ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
2005ರಲ್ಲಿ ಲಂಡನ್ ಮಿಲಿಟರಿ ಕಾಲೇಜಿನಲ್ಲಿ ಓದುತ್ತಿದ್ದಾಗ ರಾಜಕುಮಾರ ಅಲ್-ವಲೀದ್ ಅವರಿಗೆ ಅಪಘಾತವಾಗಿತ್ತು. ಅಪಘಾತದಲ್ಲಿ ಮೆದುಳಿನ ರಕ್ತಸ್ರಾವವಾಗಿತ್ತು. ಬಳಿಕ ಅವರನ್ನು ರಿಯಾದ್‌ನ ಕಿಂಗ್ ಅಬ್ದುಲಜೀಜ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಮೆರಿಕ ಮತ್ತು ಸ್ಪೇನ್‌ನ ತಜ್ಞ ವೈದ್ಯರು ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಿದ್ದರು. ಅದರೆ ಅವರಿಗೆ ಪ್ರಜ್ಞೆ ಮರಳಿ ಬಂದಿರಲಿಲ್ಲ. ಘಟನೆ ನಡೆದಾಗ ಅವರಿಗೆ 15 ವರ್ಷ. ಅಂದಿನಿಂದ 20 ವರ್ಷಗಳ ಕಾಲ ಅವರು ಕೋಮಾದಲ್ಲಿದ್ದರು. ಮಲ್ಲಗಿದ್ದಲ್ಲೇ ಇದ್ದರಿಂದ ಅವರನ್ನು ಸೌದಿ ಅರೇಬಿಯಾದ 'ಸ್ಲೀಪಿಂಗ್ ಪ್ರಿನ್ಸ್' ಎಂದೇ ಕರೆಯಲಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.