ADVERTISEMENT

ಅಫ್ಗಾನ್‌ನಲ್ಲಿ TTP ಉಗ್ರರಿಗೆ ಆಶ್ರಯ: ಪಾಕ್ ವಿಶೇಷ ಪ್ರತಿನಿಧಿ ಆಸಿಫ್ ದುರಾನಿ

ಪಿಟಿಐ
Published 17 ಮಾರ್ಚ್ 2024, 13:34 IST
Last Updated 17 ಮಾರ್ಚ್ 2024, 13:34 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಇಸ್ಲಾಮಾಬಾದ್: ‘ನಿಷೇಧಿತ ಉಗ್ರ ಸಂಘಟನೆ ‘‘ತೆಹ್ರೀಕ್‌–ಇ– ತಾಲಿಬಾನ್‌ ಪಾಕಿಸ್ತಾನದ (ಟಿಟಿಪಿ) 5 ಸಾವಿರದಿಂದ 6 ಸಾವಿರ ಉಗ್ರರು ಅಫ್ಗಾನಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ’ ಎಂದು ಅಫ್ಗಾನಿಸ್ತಾನದಲ್ಲಿನ ರಾಯಭಾರಿ ಕಚೇರಿಯ ಪಾಕಿಸ್ತಾನದ ವಿಶೇಷ ಪ್ರತಿನಿಧಿ ಆಸಿಫ್‌ ದುರಾನಿ ಶನಿವಾರ ಹೇಳಿದ್ದಾರೆ.

‘'ಪಾಕಿಸ್ತಾನ ಇನ್‌ಸ್ಟಿಟ್ಯೂಟ್‌ ಆಫ್‌ ಪೀಸ್‌ ಸ್ಟಡೀಸ್‌‘ (ಪಿಐಪಿಎಸ್‌) ಆಯೋಜಿಸಿದ್ದ ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದ ಆಸಿಫ್‌ ಅವರು, ‘ಅಫ್ಗಾನಿಸ್ತಾನದಲ್ಲಿರುವ ಟಿಟಿಪಿ ಉಗ್ರರ ಕುಟುಂಬಗಳ ಸದಸ್ಯರನ್ನು ಸಹ ಸೇರಿಸಿದರೆ ಆಶ್ರಯ ಪಡೆದಿರುವವರ ಸಂಖ್ಯೆ ಸುಮಾರು 70 ಸಾವಿರದಷ್ಟಾಗುತ್ತದೆ ಎಂದಿದ್ದಾರೆ’ ಎಂದು ದಿ ಡಾನ್‌ ಪತ್ರಿಕೆ ವರದಿ ಮಾಡಿದೆ.

ADVERTISEMENT

‘ಈ ಹಿಂದೆ ಟಿಟಿಪಿಯೊಂದಿಗೆ ನಡೆಸಿದ ಶಾಂತಿ ಮಾತುಕತೆಗಳು ವಿಫಲವಾಗಿದ್ದವು. ಟಿಟಿಪಿ ಉಗ್ರರು ನಮಗೆ ಶರಣಾಗಲು ಸಿದ್ಧರಿರಲಿಲ್ಲ ಅಥವಾ ಪಾಕಿಸ್ತಾನದ ಸಂವಿಧಾನ ಬಗ್ಗೆ ಬದ್ಧತೆ ಹೊಂದಿರಲಿಲ್ಲ. ಅಫ್ಗಾನಿಸ್ತಾನದಲ್ಲಿ ಈ ಉಗ್ರ ಸಂಘಟನೆಯನ್ನು ನಿರ್ವಹಣೆ ಮಾಡಲು ಇತರೆ ಮೂಲಗಳಿಂದ ಆರ್ಥಿಕ ಸಹಾಯ ದೊರೆಯುತ್ತಿರುವುದಂತೂ ಸ್ಪಷ್ಟ. ಏಕೆಂದರೆ ಅಲ್ಲಿನ ಸರ್ಕಾರಕ್ಕೆ ಇವರ ವೆಚ್ಚ ಭರಿಸುವುದು ಸಾಧ್ಯವಿಲ್ಲ’ ಎಂದು ದುರಾನಿ ಅವರು ಮಾಹಿತಿ ನೀಡಿದ್ದಾರೆ.

‘ಶಾಂತಿ ಮಾತುಕತೆಗಳು ವಿಫಲವಾಗಲು ಮತ್ತೊಂದು ಕಾರಣವೇನೆಂದರೆ ತಾನು ಮಾಡಿದ ಘೋರ ಅಪರಾಧಗಳಿಗೆ ಸಂಬಂಧಿಸಿದಂತೆ ಟಿಟಿಪಿ ಕಾನೂನನ್ನು ಎದುರಿಸಲು ಸಿದ್ಧವಿಲ್ಲ. ಉಗ್ರರನ್ನು ನಮಗೆ ಒಪ್ಪಿಸಬೇಕೆಂದು ಈಗಾಗಲೇ ಪಾಕಿಸ್ತಾನ ಸರ್ಕಾರವು ಕಾಬೂಲ್‌ನ ಸರ್ಕಾರವನ್ನು ಕೇಳಿಕೊಂಡಿದೆ. ಅಲ್ಲದೇ ಆ ಉಗ್ರರನ್ನು ನಿಶ್ಶಸ್ತ್ರರನ್ನಾಗಿ ಮಾಡಿ, ಅವರ ನಾಯಕರನ್ನು ಬಂಧಿಸುವಂತೆಯೂ ಹೇಳಿದೆ. ಒಟ್ಟಿನಲ್ಲಿ ಪಾಕಿಸ್ತಾನಕ್ಕೆ ಟಿಟಿಪಿ ಅಪಾಯಕಾರಿ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.