ADVERTISEMENT

Iran-Israel conflict | ಸ್ಥಳಾಂತರದ ನಿರೀಕ್ಷೆಯಲ್ಲಿ ಭಾರತದ ವಿದ್ಯಾರ್ಥಿಗಳು

ಪಿಟಿಐ
Published 17 ಜೂನ್ 2025, 14:26 IST
Last Updated 17 ಜೂನ್ 2025, 14:26 IST
<div class="paragraphs"><p>ಇಸ್ರೇಲ್ ಇರಾನ್‌ ನಡುವಿನ ಸಂಘರ್ಷ ತೀವ್ರಗೊಂಡಿದೆ</p></div>

ಇಸ್ರೇಲ್ ಇರಾನ್‌ ನಡುವಿನ ಸಂಘರ್ಷ ತೀವ್ರಗೊಂಡಿದೆ

   

ಸಾಂದರ್ಭಿಕ ಚಿತ್ರ

ನವದೆಹಲಿ: ಇರಾನ್‌ ರಾಜಧಾನಿ ಟೆಹರಾನ್‌ನ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಭಾರತದ 70ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಾಯುದಾಳಿಯ ಸೈರನ್‌ ಸದ್ದಿನ ನಡುವೆ ಜೀವಭಯದಲ್ಲೇ ಬದುಕುತ್ತಿದ್ದು, ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

‘ಇರಾನ್‌ನಲ್ಲಿ ಏನಾಗುತ್ತಿದೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ. ಸುರಕ್ಷತೆಯ ಉದ್ದೇಶದಿಂದ ನಮ್ಮನ್ನು ನೆಲಮಾಳಿಗೆಯಲ್ಲಿ ಇರಿಸಲಾಗಿದೆ. ಆದರೂ ಭಯದ ವಾತಾವರಣದಲ್ಲೇ ಬದುಕುವಂತಾಗಿದೆ’ ಎಂದು ವಿಶ್ವವಿದ್ಯಾಲಯದ 3ನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿನಿ ಮೆಹ್ರೀನ್‌ ಜಾಫರ್‌ ಅಳಲು ತೋಡಿಕೊಂಡಿದ್ದಾರೆ.

‘ಇಂಟರ್‌ನೆಟ್‌ ಸಂಪರ್ಕ ದುರ್ಬಲವಾಗಿದೆ. ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಯೋಗಕ್ಷೇಮದ ಕುರಿತು ಕುಟುಂಬಸ್ಥರಿಗೆ ಚಿಂತೆಯಾಗಿದೆ’ ಎಂದಿದ್ದಾರೆ.

‘ನಾವು ಇದೇ ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ನಮಗೆ ಸಹಾಯದ ಅಗತ್ಯವಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನಂಬಿಕೆ ಇಟ್ಟಿದ್ದೇವೆ’ ಎಂದಿದ್ದಾರೆ.

‘ಟೆಹರಾನ್‌ನಲ್ಲಿರುವಂತೆ ಕೆರ್ಮನ್‌ನಲ್ಲಿ ಪರಿಸ್ಥಿತಿ ಕೆಟ್ಟದಾಗಿಲ್ಲ. ಆದರೂ ಭಯದಲ್ಲೇ ಇದ್ದೇವೆ. ನಮ್ಮನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ ಭರವಸೆಯಲ್ಲಿದ್ದೇವೆ’ ಎಂದು ಕೆರ್ಮನ್‌ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ 21 ವರ್ಷದ ವಿದ್ಯಾರ್ಥಿ ಫೈಜಾನ್‌ ನಬಿ ಹೇಳಿದ್ದಾರೆ.

ಉರ್ಮಿಯ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹೈಜೈಫ್‌ ಮಲ್ಲಿಕ್‌ ಭಾರತೀಯ ಅಧಿಕಾರಿಗಳ ಮೂಲಕ ಅರ್ಮೇನಿಯಾಕ್ಕೆ ಸ್ಥಳಾಂತರಗೊಂಡಿದ್ದಾರೆ.

ಭಾರತಕ್ಕೆ ವಿದ್ಯಾರ್ಥಿಗಳ ಸ್ಥಳಾಂತರ ಇಂದು

‘ಭಾರತದ ಎಲ್ಲ ವಿದ್ಯಾರ್ಥಿಗಳು ಇರಾನ್‌–ಅರ್ಮೇನಿಯಾ ಗಡಿಯನ್ನು ದಾಟಿ ಯರೆವಾನ್‌ ನಗರ ತಲುಪಿದ್ದಾರೆ. ಅವರಿಗೆ ಹೋಟೆಲ್‌ ಹಾಗೂ ನಿಗದಿತ ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಅರ್ಮೇನಿಯಾದಿಂದ ದೆಹಲಿಗೆ ವಿಮಾನದ ಮೂಲಕ ಬುಧವಾರ ಕರೆದೊಯ್ಯಲಾಗುತ್ತದೆ. ಭಾರತೀಯ ಅಧಿಕಾರಿಗಳ ಸಮನ್ವಯದೊಂದಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳ ಸಂಘ ತಿಳಿಸಿದೆ. 

ಸಂಪರ್ಕದಲ್ಲಿರಲು ಸೂಚನೆ

ಎಲ್ಲ ಭಾರತೀಯರು ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಂಗಳವಾರ ಸೂಚಿಸಿದೆ. ಭಾರತೀಯರು ವಾಸವಿರುವ ಸ್ಥಳ ಹಾಗೂ ಸಂಪರ್ಕ ಸಂಖ್ಯೆಯನ್ನು ನೀಡಬೇಕು. ತಮ್ಮ ಸ್ವಂತ ಸಂಪನ್ಮೂಲ ಬಳಸಿಕೊಂಡು ಟೆಹರಾನ್‌ ನಗರದಿಂದ ಹೊರಗೆ ತೆರಳಬೇಕು ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ. 24x7 ಕಾರ್ಯ ನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಸಹಾಯವಾಣಿ ಸಂಖ್ಯೆ 1800118797 ಸಂಪರ್ಕಿಸಬಹುದು ಎಂದು ನವದೆಹಲಿಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇಸ್ರೇಲ್‌ ಹಾಗೂ ಇರಾನ್‌ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಭಾರತದ ವಿದ್ಯಾರ್ಥಿಗಳನ್ನು ಟೆಹರಾನ್‌ ನಗರದಿಂದ ಹೊರಗೆ ಸ್ಥಳಾಂತರಿಸಲಾಗಿದೆ. ಈ ಪೈಕಿ 110 ಮಂದಿ ಅರ್ಮೇನಿಯಾ ಗಡಿಯನ್ನು ದಾಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.