ಹಾನ್ ಡಕ್–ಸೂ
ಸೋಲ್: ದೇಶದಲ್ಲಿ ಮಿಲಿಟರಿ ಆಡಳಿತ ಜಾರಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕೊರಿಯಾದ ನೂತನ ಅಧ್ಯಕ್ಷ ಹಾನ್ ಡಕ್–ಸೂ ಅವರ ವಿರುದ್ಧ ವಾಗ್ದಂಡನೆ ವಿಧಿಸದಿರಲು ಪ್ರಮುಖ ಪ್ರತಿಪಕ್ಷವಾದ ಡೆಮಾಕ್ರಟಿಕ್ ಪಕ್ಷ ನಿರ್ಧರಿಸಿದೆ ಎಂದು ಪಕ್ಷದ ನಾಯಕ ಲೀ ಜೇ-ಮ್ಯುಂಗ್ ಭಾನುವಾರ ಹೇಳಿದ್ದಾರೆ.
ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಪದಚ್ಯುತಿಗೊಳಿಸುವ ನಿರ್ಣಯವನ್ನು ಸಂಸತ್‌ನಲ್ಲಿ ಶನಿವಾರ ಅಂಗೀಕರಿಸಲಾಗಿದೆ. ಈ ಮೂಲಕ, ದೇಶದಲ್ಲಿ ಮಿಲಿಟರಿ ಆಡಳಿತ ಜಾರಿಗೊಳಿಸಿದ್ದಕ್ಕಾಗಿ ಯೋಲ್ ಅವರು ಅಧಿಕಾರ ಕಳೆದುಕೊಂಡಿದ್ದಾರೆ.
ಅಧ್ಯಕ್ಷರಿಗೆ ವಾಗ್ದಂಡನೆ ವಿಧಿಸಬೇಕೆಂದು ಕೋರಿದ್ದ ನಿರ್ಣಯವನ್ನು ಸಂಸತ್‌ನಲ್ಲಿ (ನ್ಯಾಷನಲ್ ಅಸೆಂಬ್ಲಿ) ಮಂಡಿಸಿದ ವೇಳೆ, ಕಾವೇರಿದ ಚರ್ಚೆ ನಡೆದಿತ್ತು. ನಂತರ ನಿರ್ಣಯವನ್ನು 204–85 ಮತಗಳಿಂದ ಅಂಗೀಕರಿಸಲಾಗಿತ್ತು. ಯೋಲ್ ಅವರು ಪ್ರತಿನಿಧಿಸುವ ಕನ್ಸರ್ವೇಟಿವ್ ಪೀಪಲ್ ಪವರ್ ಪಾರ್ಟಿಯ (ಪಿಪಿಪಿ) ಕೆಲ ಸದಸ್ಯರು ಕೂಡ ನಿರ್ಣಯದ ಪರವಾಗಿಯೇ ಮತ ಚಲಾಯಿಸಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ, ಯೋಲ್ ಅವರು ಅಧಿಕಾರವನ್ನು ಮೊಟಕುಗೊಳಿಸಲಾಗಿದ್ದು, ಪ್ರಧಾನಿ ಹಾನ್ ಡಕ್–ಸೂ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
‘ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಬೇಕು ಎಂಬುದು ಜನರ ಆಶಯವಾಗಿತ್ತು. ಈ ಕುರಿತು ಜನರು ಪ್ರದರ್ಶಿಸಿದ ಧೈರ್ಯ ಮತ್ತು ಬದ್ಧತೆಯ ಫಲವಾಗಿ ಯೋಲ್ ಅವರ ಪದಚ್ಯುತಿಯಾಗಿದೆ’ ಎಂದು ಸ್ಪೀಕರ್ ವೂ ವೊನ್ ಶಿಕ್ ಹೇಳಿದ್ದಾರೆ.
ಯೋಲ್ ವಿರುದ್ಧದ ವಾಗ್ದಂಡನೆ ನಿರ್ಣಯ ಕುರಿತು ಸಂಸತ್‌ನಲ್ಲಿ ಎರಡನೇ ಬಾರಿ ನಡೆದ ಮತದಾನ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.