ಸೋಲ್: ದೇಶದಲ್ಲಿ ಸೇನಾಡಳಿತ ಹೇರಿದ್ದ ಯೂನ್ ಸುಕ್ ಯೋಲ್ ಅವರಿಗೆ ವಾಗ್ದಂಡನೆ ವಿಧಿಸಿ, ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿದ ಬೆನ್ನಲ್ಲೇ, ಸುಗಮ ಆಡಳಿತಕ್ಕಾಗಿ ಸರ್ಕಾರದೊಂದಿಗೆ ಕೈಜೋಡಿಸಲು ತಾನು ಸಿದ್ಧ ಎಂದು ದಕ್ಷಿಣ ಕೊರಿಯಾದ ವಿರೋಧ ಪಕ್ಷವೊಂದು ಭಾನುವಾರ ಹೇಳಿದೆ.
ಸಂಸತ್‌ನಲ್ಲಿ (ನ್ಯಾಷನಲ್ ಅಸೆಂಬ್ಲಿ) ಅಧಿಕ ಸ್ಥಾನ ಹೊಂದಿರುವ ಪ್ರಮುಖ ಪ್ರತಿಪಕ್ಷ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ನಾಯಕ ಲಿ ಜೊ–ಮ್ಯುಂಗ್ ಅವರು ‘ರಾಷ್ಟ್ರೀಯ ಸರ್ಕಾರ’ ರಚಿಸಬೇಕು ಎಂಬ ಪ್ರಸ್ತಾವ ಮುಂದಿಟ್ಟಿದ್ದಾರೆ.
‘ಬದಲಾದ ವ್ಯವಸ್ಥೆಯಲ್ಲಿ ಸ್ಥಿರ ಸರ್ಕಾರಕ್ಕಾಗಿ ಸಂಸತ್ ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಅಲ್ಲದೆ, ಹಂಗಾಮಿ ಅಧ್ಯಕ್ಷ ಹಾನ್ ಡಕ್–ಸೂ ಅವರ ವಿರುದ್ಧ ನಮ್ಮ ಪಕ್ಷ ವಾಗ್ದಂಡನೆ ಗೊತ್ತುವಳಿ ಮಂಡನೆ ಮಾಡುವುದಿಲ್ಲ’ ಎಂದೂ ಲಿ ಹೇಳಿದ್ದಾರೆ.
‘ಉದ್ದೇಶಿತ ‘ರಾಷ್ಟ್ರೀಯ ಸರ್ಕಾರ’ವು ದೇಶ ಎದುರಿಸುತ್ತಿರುವ ಸಂಕಷ್ಟ ನಿವಾರಣೆ ಹಾಗೂ ಅಂತರರಾಷ್ಟ್ರೀಯ ಸಮುದಾಯದ ವಿಶ್ವಾಸ ಮರುಸ್ಥಾಪನೆಗೆ ಶ್ರಮಿಸಲಿದೆ’ ಎಂದಿದ್ದಾರೆ.
ಆದರೆ, ಲಿ ಅವರ ಈ ಪ್ರಸ್ತಾವ ಕಾರ್ಯಗತವಾಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸಂಸತ್ ಸ್ಪೀಕರ್ ಅವರೊಂದಿಗಿನ ಸಭೆ ವೇಳೆ ಹಂಗಾಮಿ ಅಧ್ಯಕ್ಷ ಹಾನ್ ಡಕ್–ಸೂ ಅವರು ಲಿ ಮುಂದಿಟ್ಟಿರುವ ಪ್ರಸ್ತಾವವನ್ನು ಪ್ರಸ್ತಾಪಿಸಿದ್ದಾರೆ. ಆದರೆ, ‘ರಾಷ್ಟ್ರೀಯ ಸರ್ಕಾರ’ ರಚನೆಗೆ ಸಂಬಂಧಿಸಿ ಒಲವು ವ್ಯಕ್ತಪಡಿಸಿಲ್ಲ ಎಂದು ಮೂಲಗಳು ಹೇಳಿವೆ.
ಇಂದು ವಿಚಾರಣೆ
ಯೂನ್ ಸುಕ್ ಯೋಲ್ ಅವರನ್ನು ಪದಚ್ಯುತಿಗೊಳಿಸಿರುವುದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸಾಂವಿಧಾನಿಕ ಕೋರ್ಟ್ ಸೋಮವಾರ (ಡಿ.16) ನಡೆಸಲಿದೆ. ಈ ಕುರಿತ ತೀರ್ಪನ್ನು 180 ದಿನಗಳ ಒಳಗಾಗಿ ಕೋರ್ಟ್ ಪ್ರಕಟಿಸಬೇಕು. ಒಂದು ವೇಳೆ ಪದಚ್ಯುತಿಯನ್ನು ಎತ್ತಿ ಹಿಡಿದು ತೀರ್ಪು ನೀಡಿದಲ್ಲಿ ಆರು ತಿಂಗಳ ಒಳಗಾಗಿ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಬೇಕು.
ಮನವಿ: ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ಸುದ್ದಿವಾಹಿನಿ ಜೊತೆ ಮಾತನಾಡಿದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ನಾಯಕ ಲಿ ಜೊ–ಮ್ಯುಂಗ್ ‘ಯೋಲ್ ಪದಚ್ಯುತಿ ಕುರಿತು ಸಾಂವಿಧಾನಿಕ ಕೋರ್ಟ್ ಶೀಘ್ರವೇ ತನ್ನ ನಿರ್ಣಯ ಪ್ರಕಟಿಸಬೇಕು. ದೇಶದಲ್ಲಿ ಸೃಷ್ಟಿಯಾಗಿರುವ ಗೊಂದಲ ಹಾಗೂ ಜನರ ಸಂಕಷ್ಟ ನಿವಾರಿಸಲು ಇದೊಂದೇ ನಮ್ಮ ಮುಂದಿರುವ ಮಾರ್ಗ’ ಎಂದು ಹೇಳಿದ್ದಾರೆ.
ಬೈಡನ್ ಜೊತೆ ಹಾನ್ ಚರ್ಚೆ
ಹಂಗಾಮಿ ಅಧ್ಯಕ್ಷ ಹಾನ್ ಡಕ್–ಸೂ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಭಾನುವಾರ ದೂರವಾಣಿ ಮೂಲಕ ಮಾತನಾಡಿದ್ದಾರೆ. ದೇಶದಲ್ಲಿನ ರಾಜಕೀಯ ಪರಿಸ್ಥಿತಿ ಹಾಗೂ ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆ ಪ್ರಾದೇಶಿಕ ಭದ್ರತೆಗೆ ಎದುರಾಗಿರುವ ಸವಾಲುಗಳ ಕುರಿತು ಚರ್ಚಿಸಿದರು. ಬೈಡನ್ ಅಗತ್ಯ ನೆರವಿನ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.