ADVERTISEMENT

ದಕ್ಷಿಣ ಕೊರಿಯಾ ಮುಂದುವರಿದ ಬಿಕ್ಕಟ್ಟು; ಯೂನ್‌ ಬಂಧನಕ್ಕೆ ಭಾನುವಾರವೂ ಅಡ್ಡಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 14:57 IST
Last Updated 5 ಜನವರಿ 2025, 14:57 IST
<div class="paragraphs"><p>ದಕ್ಷಿಣ ಕೊರಿಯಾ</p></div>

ದಕ್ಷಿಣ ಕೊರಿಯಾ

   

ರಾಯಿಟರ್ಸ್ ಚಿತ್ರ

ಸೋಲ್‌: ವಾಗ್ದಂಡನೆಗೆ ಗುರಿಯಾಗಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್‌ ಸುಕ್‌ ಯೋಲ್‌ ಅವರ ಬಂಧನಕ್ಕೆ ಅವರ ಭದ್ರತಾ ಮುಖ್ಯಸ್ಥರು ಭಾನುವಾರವೂ ಸಹಕರಿಸಲಿಲ್ಲ.

ADVERTISEMENT

ಕಳೆದ ತಿಂಗಳು ಮಿಲಿಟರಿ ಆಡಳಿತ ಜಾರಿಗೊಳಿಸಿದ ಯೂನ್ ಅವರನ್ನು ಈಗಾಗಲೇ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ.

ಅವರ ಬಂಧನಕ್ಕೆ ಹೊರಡಿಸಿರುವ ವಾರಂಟ್‌ ಸೋಮವಾರ ಮಧ್ಯರಾತ್ರಿ ಕೊನೆಗೊಳ್ಳಲಿರುವ ಕಾರಣ, ಇದು ದೇಶದಲ್ಲಿ ರಾಜಕೀಯ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಬಂಧನದ ವಾರಂಟ್‌ ಕಾನೂನುಬಾಹಿರವಾಗಿ ಎಂದು ಪ್ರತಿಪಾದಿಸಿದ್ದ ಯೂನ್‌ ಅವರ ವಕೀಲರ ವಾದವನ್ನು ಸೋಲ್‌ ನ್ಯಾಯಾಲಯ ತಿರಸ್ಕರಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಸೋಲ್‌ನತ್ತ ಬ್ಲಿಂಕೆನ್‌: ದಕ್ಷಿಣ ಕೊರಿಯಾದಲ್ಲಿ ರಾಜಕೀಯ ಬಿಕಟ್ಟಿನ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು‌ ಸೋಲ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ಅವರು ದಕ್ಷಿಣ ಕೊರಿಯಾದ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹಾರಕ್ಕೆ ಯತ್ನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಮಪಾತದ ನಡುವೆಯೂ ಪ್ರತಿಭಟನೆ: ಅಧ್ಯಕ್ಷ ಯೂನ್‌ ಸುಕ್‌ ಯೋಲ್‌ ಅವರ ಪರ ಮತ್ತು ವಿರುದ್ಧ ಬೆಂಬಲಿಗರು ಹಿಮಪಾತದ ನಡುವೆಯೂ ಭಾನುವಾರ ಪ್ರತಿಭಟನಾ ರ್‍ಯಾಲಿಗಳನ್ನು ನಡೆಸಿದರು.

ಯೂನ್‌ ಅವರನ್ನು ಬಂಧಿಸುವ ಸಾಧ್ಯತೆ ಇದ್ದಿದ್ದರಿಂದ ಭಾರಿ ಸಂಖ್ಯೆಯಲ್ಲಿ ಅವರ ಬೆಂಬಲಿಗರು ಅಧ್ಯಕ್ಷರ ನಿವಾಸದ ಬಳಿ ಜಮಾಯಿಸಿ, ಪ್ರತಿಭಟಿಸಿದರು.

ಒಂದೆಡೆ ಯೂನ್‌ ಬೆಂಬಲಿಗರು ಅವರನ್ನು ವಾಗ್ದಂಡನೆಗೆ ಗುರಿಪಡಿಸಬಾರದು ಎಂದು ಅಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರೆ, ಇನ್ನೊಂದೆಡೆ ಕೆಲವರು, ಅವರನ್ನು ಬಂಧಿಸುವಂತೆ ಒತ್ತಾಯಿಸಿ ರ್‍ಯಾಲಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.