ADVERTISEMENT

ದಕ್ಷಿಣ ಕೊರಿಯಾ ಅಧ್ಯಕ್ಷರ ಪದಚ್ಯುತಿ: ವಾಗ್ದಂಡನೆ ನಿರ್ಣಯ ಅನುಮೋದಿಸಿದ ಸಂಸತ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2024, 10:25 IST
Last Updated 14 ಡಿಸೆಂಬರ್ 2024, 10:25 IST
<div class="paragraphs"><p>ಯೂನ್ ಸುಕ್ ಯೋಲ್</p></div>

ಯೂನ್ ಸುಕ್ ಯೋಲ್

   

ಸೋಲ್‌: ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಪದಚ್ಯುತಿಗೊಳಿಸುವ ನಿರ್ಣಯವನ್ನು, ರಾಷ್ಟ್ರೀಯ ಅಸೆಂಬ್ಲಿ ಅಂಗೀಕರಿಸಿದೆ. ಈ ಮೂಲಕ, ದೇಶದಲ್ಲಿ ಮಿಲಿಟರಿ ಆಡಳಿತ ಜಾರಿಗೊಳಿಸಿದ್ದಕ್ಕಾಗಿ ಯೋಲ್‌ ಅವರ ವಿರುದ್ಧ ವಾಗ್ದಂಡನೆ ಗೊತ್ತುವಳಿಯನ್ನು ಮಂಡಿಸಲಾಗಿತ್ತು.

ಅಧ್ಯಕ್ಷರಿಗೆ ವಾಗ್ದಂಡನೆ ವಿಧಿಸಬೇಕೆಂದು ಕೋರಿದ್ದ ಈ ನಿರ್ಣಯದ ಬಗ್ಗೆ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಶನಿವಾರ ಕಾವೇರಿದ ಚರ್ಚೆ ನಡೆಯಿತು. ನಂತರ ನಿರ್ಣಯವನ್ನು 204–85 ಮತಗಳಿಂದ ಅಂಗೀಕರಿಸಲಾಯಿತು.

ADVERTISEMENT

ಯೋಲ್ ಅವರು ಪ್ರತಿನಿಧಿಸುವ ಕನ್ಸರ್ವೇಟಿವ್ ಪೀಪಲ್‌ ಪವರ್ ಪಾರ್ಟಿಯ (ಪಿಪಿಪಿ) ಕೆಲ ಸದಸ್ಯರು ಕೂಡ ನಿರ್ಣಯದ ಪರವಾಗಿಯೇ ಮತ ಚಲಾಯಿಸಿದ್ದಾರೆ. 

ಈ ಬೆಳವಣಿಗೆ ಬೆನ್ನಲ್ಲೇ, ಯೋಲ್‌ ಅವರು ಅಧಿಕಾರವನ್ನು ಮೊಟಕುಗೊಳಿಸಲಾಯಿತು. ಪ್ರಧಾನಿ ಹಾನ್‌ ಡಕ್‌–ಸೂ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಕೋರ್ಟ್ ಅಂಗಳಕ್ಕೆ: ಅಧ್ಯಕ್ಷರ ಪದಚ್ಯುತಿಯನ್ನು ಅನುಮೋದಿಸಬೇಕೇ ಅಥವಾ ಅಧಿಕಾರವನ್ನು ಪುನಃಸ್ಥಾಪಿಸಬೇಕೇ ಎಂಬುದನ್ನು ಅಲ್ಲಿನ ಸಾಂವಿಧಾನಿಕ ಕೋರ್ಟ್‌ 180 ದಿನಗಳಲ್ಲಿ ನಿರ್ಧರಿಸಬೇಕಿದೆ. ಕೋರ್ಟ್‌ನಲ್ಲಿಯೂ ಪದಚ್ಯುತಿ ಅನುಮೋದನೆಯಾದರೆ, ಆರು ತಿಂಗಳೊಳಗೆ ಪುನಃ ಚುನಾವಣೆ ನಡೆಯಬೇಕಿದೆ.

ಯೋಲ್‌ ಅವರ ಪದಚ್ಯುತಿ ಬೆನ್ನಲ್ಲೇ, ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರು ಸಂಭ್ರಮಾಚರಣೆ ಮಾಡಿದ್ದು, ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ.

ನಿರ್ಣಯದ ಪರ 204 ಮತ ದಕ್ಷಿಣ ಕೊರಿಯಾದ ರಾಷ್ಟ್ರೀಯ ಅಸೆಂಬ್ಲಿ ಸದಸ್ಯ ಬಲ 300 ಇದ್ದು ವಾಗ್ದಂಡನೆಗೆ ಗುರಿಪಡಿಸಲು ಕನಿಷ್ಠ 200 ಸದಸ್ಯರ ಬೆಂಬಲ ಅಗತ್ಯವಿತ್ತು. ನಿರ್ಣಯ ತಂದಿರುವ ಪ್ರತಿಪಕ್ಷಗಳ ಸದಸ್ಯ ಬಲ 192 ಆಗಿದ್ದು ನಿರ್ಣಯವು ಅಂಗೀಕಾರವಾಗಬೇಕಾದರೆ ಆಡಳಿತಾರೂಢ ಪಿಪಿಪಿಯ ಕನಿಷ್ಠ 8 ಸದಸ್ಯರ ಬೆಂಬಲವು ಅಗತ್ಯವಿತ್ತು. ನಿರ್ಣಯವನ್ನು ಶನಿವಾರ ಮತಕ್ಕೆ ಹಾಕಿದಾಗ ಪಿಪಿಪಿ ಪಕ್ಷದ 12 ಮಂದಿ ನಿರ್ಣಯದ ಪರ ಮತ ಹಾಕಿದರು. ಇದಕ್ಕೂ ಮುನ್ನ ಡಿಸೆಂಬರ್‌ 7ರಂದು ಇಂತದ್ದೇ ನಿರ್ಣಯಕ್ಕೆ ಮೂರನೇ ಎರಡರಷ್ಟು ಬೆಂಬಲ ಸಿಗದ ಕಾರಣ ಯೋಲ್‌ ಅವರು ಪದಚ್ಯುತಿ ಕ್ರಮದಿಂದ ಪಾರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.