ADVERTISEMENT

ವಿಕ್ರಮಸಿಂಘೆ ನೇಮಕ ಜನರ ಆಶಯಕ್ಕೆ ವಿರುದ್ಧ: ಶ್ರೀಲಂಕಾದ ಪ್ರತಿಪಕ್ಷಗಳ ಆಕ್ರೋಶ

ಶ್ರೀಲಂಕಾ ವಿರೋಧ ಪಕ್ಷಗಳ ಆಕ್ರೋಶ * ಭಾರತದ ಹೈಕಮಿಷನ್‌ನಿಂದ ವೀಸಾ ಸೇವೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 13 ಮೇ 2022, 12:41 IST
Last Updated 13 ಮೇ 2022, 12:41 IST
ಕೊಲಂಬೊದಲ್ಲಿ ಜನರು ರಸ್ತೆಯಲ್ಲಿ ಖಾಲಿ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಕುಳಿತು ಅಡುಗೆ ಅನಿಲ ಮತ್ತು ಇಂಧನ ಕೊರತೆ ವಿರುದ್ಧ ಪ್ರತಿಭಟನೆ ನಡೆಸಿದರು.   -ಎಎಫ್‌ಪಿ ಚಿತ್ರ
ಕೊಲಂಬೊದಲ್ಲಿ ಜನರು ರಸ್ತೆಯಲ್ಲಿ ಖಾಲಿ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಕುಳಿತು ಅಡುಗೆ ಅನಿಲ ಮತ್ತು ಇಂಧನ ಕೊರತೆ ವಿರುದ್ಧ ಪ್ರತಿಭಟನೆ ನಡೆಸಿದರು.   -ಎಎಫ್‌ಪಿ ಚಿತ್ರ   

ಕೊಲಂಬೊ: ‘ದೇಶದ ಪ್ರಧಾನಿಯಾಗಿ ರಾನಿಲ್ ವಿಕ್ರಮಸಿಂಘೆ ಅವರ ನೇಮಕವು ಜನರ ಆಶಯಕ್ಕೆ ವಿರುದ್ಧವಾಗಿದೆ’ ಎಂದಿರುವ ವಿರೋಧ ಪಕ್ಷಗಳು, ವಿಕ್ರಮಸಿಂಘೆ ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಣೆ ಶುಕ್ರವಾರ ಮಾಡಿವೆ.

ದೇಶದ 26ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ರಾನಿಲ್ ವಿಕ್ರಮಸಿಂಘೆ ಅವರು ಶುಕ್ರವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ವಿಕ್ರಮಸಿಂಘೆ ಅವರು ರಾಜಪಕ್ಸ ಬಣದ ಆತ್ಮೀಯರಾಗಿದ್ದಾರೆ. ಆದರೆ, ಈ ಬಾರಿ ಅವರಿಗೆ ಸಾರ್ವಜನಿಕರು ಮತ್ತು ಪ್ರತಿಪಕ್ಷಗಳು ಸಹಕಾರ ನೀಡುತ್ತಿಲ್ಲ. ಹೀಗಾಗಿ ಅವರು 225 ಸದಸ್ಯ ಬಲದ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಲಿದ್ದಾರೆಯೇ ಎಂಬುದು ಕಾದು ನೋಡಬೇಕು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಈ ನಡುವೆ, 54 ಸಂಸದರನ್ನು ಹೊಂದಿರುವ ಪ್ರಮುಖ ವಿರೋಧಪಕ್ಷ ಎಸ್‌ಜೆಬಿ, ಅಧ್ಯಕ್ಷ ಗೊಟಬಯ ರಾಜಪಕ್ಸ ವಿರುದ್ಧದ ನಿರ್ಣಯ ಮತ್ತು ದೇಶದ ಪ್ರಸ್ತುತ ಸ್ಥಿತಿ ಕುರಿತು ಚರ್ಚೆ ನಡೆಸಿತು. ಅಲ್ಲದೆ ಜನತಾ ವಿಮುಕ್ತಿ ಪೆರಮುನಾ(ಜೆವಿಪಿ) ಮತ್ತು ತಮಿಳು ನ್ಯಾಷನಲ್ ಅಲಯನ್ಸ್ ಸಹ ವಿಕ್ರಮಸಿಂಘೆ ಅವರ ನೇಮಕವನ್ನು ಅಸಾಂವಿಧಾನಿಕ ಎಂದು ಟೀಕಿಸಿವೆ.

ADVERTISEMENT

ವೀಸಾ ಸೇವೆ ಸ್ಥಗಿತ: ಭಾರತ ಹೈಕಮಿಷನ್

ವೀಸಾ ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ವೀಸಾ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್ ಶುಕ್ರವಾರ ತಿಳಿಸಿದೆ. ವೀಸಾ ವಿಭಾಗದಲ್ಲಿ ಬಹುತೇಕ ಶ್ರೀಲಂಕಾದವರೇ ಕಾರ್ಯ ನಿರ್ವಹಿಸುತ್ತಿದ್ದು, ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೈಕಮಿಷನ್ ತಿಳಿಸಿದೆ.

ಸಂಸದನ ಸಾವು ಆತ್ಮಹತ್ಯೆಯಲ್ಲ, ಕೊಲೆ: ಪೊಲೀಸರ ಹೇಳಿಕೆ

‘ಸರ್ಕಾರಿ ವಿರೋಧಿ ಮತ್ತು ಬೆಂಬಲಿಗರ ನಡುವಿನ ಗಲಭೆ ವೇಳೆ ಮೃತಪಟ್ಟ ಸಂಸದನ ಸಾವು ಆತ್ಮಹತ್ಯೆಯಲ್ಲ. ಅವರನ್ನು ಬಡಿದು ಕೊಲ್ಲಲಾಗಿದೆ’ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಸೋಮವಾರ ದೇಶದಾದ್ಯಂತ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಆಗಿನ ಆಡಳಿತಾರೂಢ ಪಕ್ಷದ ಸಂಸದಅಮರಕೀರ್ತಿ ಅತುಕೊರಲಾ ಅವರು ನಿಟ್ಟಂಬುವಾ ಎಂಬ ಪಟ್ಟಣದಲ್ಲಿ ಮೃತಪಟ್ಟಿದ್ದರು. ತಮ್ಮ ಕಾರನ್ನು ಅಡ್ಡಗಟ್ಟಿದ ಪ್ರತಿಭಟನಕಾರರ ಪೈಕಿ ಇಬ್ಬರ ಮೇಲೆ ಅಮರಕೀರ್ತಿ ಅವರು ಗುಂಡು ಹಾರಿಸಿದ್ದರು. ಬಳಿಕ ಪ್ರತಿಭಟನಕಾರರಿಗೆ ಬೆದರಿ, ಕಟ್ಟಡವೊಂದಕ್ಕೆ ತೆರಳಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿತ್ತು.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ವಕ್ತಾರ ನಿಹಾಲ್ ಥಲ್ಡುವಾ ಅವರು, 'ಸಂಸದರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಅವರನ್ನು ಪ್ರತಿಭಟನಕಾರರು ಭೀಕರವಾಗಿ ಹತ್ಯೆ ಮಾಡಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, 9 ಜನರ ಸಾವು ಮತ್ತು 300ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆಗೆ ಕಾರಣವಾಗಿರುವ ಹಿಂಸಾಚಾರದ ಪ್ರತಿಭಟನೆಗಳ ಕುರಿತು ಅಧ್ಯಕ್ಷ ಗೊಟಬಾಯ ರಾಜಪಕ್ಸ ಅವರು ತನಿಖೆಗೆ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.