ADVERTISEMENT

ಭಯೋತ್ಪಾದನೆ ವಿರುದ್ಧದ ಹೋರಾಟ ಇನ್ನಷ್ಟು ದೃಢ: ಸುಷ್ಮಾ ಸ್ವರಾಜ್‌ ಪ್ರತಿಪಾದನೆ

ವಿದೇಶಾಂಗ ಸಚಿವೆ

ಪಿಟಿಐ
Published 22 ಮೇ 2019, 19:49 IST
Last Updated 22 ಮೇ 2019, 19:49 IST
ಕಿರ್ಗಿಸ್ತಾನ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಬುಧವಾರ ಮಾತನಾಡಿದರು
ಕಿರ್ಗಿಸ್ತಾನ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಬುಧವಾರ ಮಾತನಾಡಿದರು   

ಬಿಷ್ಕೆಕ್‌: ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಗಾಯ ದೇಶವಾಸಿಗಳ ಮನದಿಂದ ಮರೆಯಾಗುವ ಮುನ್ನವೇ ಶ್ರೀಲಂಕಾದಲ್ಲಿಯೂ ಉಗ್ರರ ದಾಳಿಯಿಂದ ಅಮಾಯಕರು ಬಲಿಯಾದರು. ತಾನು ಭಯೋತ್ಪಾದನೆ ವಿರುದ್ಧ ನಡೆಸುತ್ತಿರುವ ಹೋರಾಟ ಈ ಘಟನೆಗಳ ಪರಿಣಾಮ ಮತ್ತಷ್ಟು ದೃಢಗೊಂಡಿದೆ ಎಂದು ಭಾರತ ಹೇಳಿದೆ.

ಕಿರ್ಗಿಸ್ತಾನದ ರಾಜಧಾನಿಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ವಿದೇಶಾಂಗ ಸಚಿವರ ಸಮಾವೇಶದಲ್ಲಿ ಭಾರತದ ಈ ನಿಲುವನ್ನು ಸಚಿವೆ ಸುಷ್ಮಾ ಸ್ವರಾಜ್‌ ಸ್ಪಷ್ಟಪಡಿಸಿದ್ದಾರೆ.

‘ಭದ್ರತೆ, ಸಹಕಾರ ಹಾಗೂ ಸಮಗ್ರತೆಗೆ ಒತ್ತು ನೀಡುವ ಭಾರತ, ಈ ಉದ್ದೇಶಗಳನ್ನು ಸಾಧಿಸಲು ಎಸ್‌ಸಿಒ ವಿಧಿಸಿರುವ ಚೌಕಟ್ಟಿನಲ್ಲಿಯೇ ಕಾರ್ಯಪ್ರವೃತ್ತವಾಗಲಿದೆ’ ಎಂದು ಸುಷ್ಮಾ ಸ್ವರಾಜ್‌ ಹೇಳಿದರು.

ADVERTISEMENT

ಸಮಾವೇಶದಲ್ಲಿ ಉಪಸ್ಥಿತರಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ, ‘ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಜೀವ ಕಳೆದುಕೊಂಡಿರುವ ಶ್ರೀಲಂಕಾದ ನಮ್ಮ ಸಹೋದರ–ಸಹೋದರಿಯರಿಗಾಗಿ ಭಾರತೀಯರ ಹೃದಯ ಮಿಡಿಯುತ್ತದೆ’ ಎಂದು ಕುಟುಕಿದರು.

ಪುಲ್ವಾಮಾ ಘಟನೆ ನಂತರ ಪಾಕಿಸ್ತಾನ ಮತ್ತು ಭಾರತ ನಡುವಿನ ಸಂಬಂಧ ಸರಿಯಾಗಿಲ್ಲ. ಆದರೂ, ಇಲ್ಲಿ ನಡೆಯುತ್ತಿರುವ ಎಸ್‌ಸಿಒ ವಿದೇಶಾಂಗ ಸಚಿವರ ಸಮಾವೇಶದ ವೇದಿಕೆಯಲ್ಲಿ, ಉಭಯ ದೇಶಗಳ ವಿದೇಶಾಂಗ ಸಚಿವರಾದ ಶಾ ಮೆಹಮೂದ್‌ ಖುರೇಷಿ ಹಾಗೂ ಸುಷ್ಮಾ ಸ್ವರಾಜ್‌ ಅಕ್ಕಪಕ್ಕ ಆಸೀನರಾಗುವ ಮೂಲಕ ಗಮನ ಸೆಳೆದರು.

ಸುಷ್ಮಾ, ಖುರೇಷಿ ಒಬ್ಬರ ಪಕ್ಕ ಒಬ್ಬರು ಕುಳಿತಿದ್ದು, ನಂತರ ಇತರ ರಾಷ್ಟ್ರಗಳ ವಿದೇಶಾಂಗ ಸಚಿವರು ಕುಳಿತಿದ್ದಾರೆ. ಈ ಚಿತ್ರವನ್ನು ಪಾಕಿಸ್ತಾನದ ಮಾಧ್ಯಮಗಳು ಪ್ರಕಟಿಸಿವೆ.

‘ಸುಧಾರಣಾ ಕ್ರಮ ಬೆಂಬಲಿಸಿ’:

‘ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತರಲು ಉದ್ದೇಶಿಸಿರುವ ಸುಧಾರಣಾ ಕ್ರಮಗಳಿಗೆ ಎಸ್‌ಸಿಒ ಸದಸ್ಯ ರಾಷ್ಟ್ರಗಳು ಬೆಂಬಲ ನೀಡಬೇಕು. ಇದರಿಂದ ಮಂಡಳಿಯನ್ನು ಹೆಚ್ಚು ಪ್ರಾತಿನಿಧಿಕ ಹಾಗೂ ಪರಿಣಾಮಕಾರಿಯನ್ನಾಗಿ ಮಾಡಲು ಸಾಧ್ಯವಾಗಲಿದೆ’ ಎಂದು ಸುಷ್ಮಾ ಸ್ವರಾಜ್‌ ಹೇಳಿದರು.

‘ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರವಾಗುವಂತಹ ಎಲ್ಲ ಅರ್ಹತೆ ಭಾರತಕ್ಕಿದೆ. ಇದು ಸಾಧ್ಯವಾಗಬೇಕಾದರೆ ಮಂಡಳಿಯಲ್ಲಿ ಸ್ವರೂಪದಲ್ಲಿ ಸುಧಾರಣೆ ಅಗತ್ಯವಿದ್ದು, ಇದನ್ನು ಭಾರತ ಹಲವು ವರ್ಷಗಳಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ಭಾರತದ ಈ ಬೇಡಿಕೆಗೆ ಅನೇಕ ರಾಷ್ಟ್ರಗಳೂ ಬೆಂಬಲ ಸೂಚಿಸಿವೆ’ ಎಂದೂ ಹೇಳಿದರು.

‘ರಷ್ಯನ್‌ ಭಾಷೆಯಲ್ಲಿಯೂ ಮಾಹಿತಿ’

ಭಾರತಕ್ಕೆ ಬರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸದಸ್ಯ ರಾಷ್ಟ್ರಗಳ ಪ್ರವಾಸಿಗರ ಅನುಕೂಲಕ್ಕಾಗಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಸಹಾಯವಾಣಿಯಲ್ಲಿ ರಷ್ಯನ್‌ ಭಾಷೆಯನ್ನೂ ಅಳವಡಿಸಲಾಗುವುದು ಎಂದು ಸಚಿವೆ ಸುಷ್ಮಾ ಸ್ವರಾಜ್‌ ಬುಧವಾರ ಪ್ರಕಟಿಸಿದರು.

‘ದೇಶಗಳ ನಡುವಿನ ಬಾಂಧವ್ಯ ಗಟ್ಟಿಯಾಗಲು ಆಯಾ ದೇಶಗಳ ಜನರ ನಡುವಿನ ಸಂವಹನ, ಸಂಪರ್ಕ ಪ್ರಮುಖ ಪಾತ್ರ ವಹಿಸುತ್ತದೆ. ಜನರನ್ನು ಹತ್ತಿರ ತರಲು ಪ್ರವಾಸೋದ್ಯಮದ ಪಾತ್ರವೂ ಅಷ್ಟೇ ಮುಖ್ಯ. ಹೀಗಾಗಿ ಈ ಕ್ಷೇತ್ರಕ್ಕೆ ಭಾರತ ಹೆಚ್ಚು ಉತ್ತೇಜನ ನೀಡಲಿದೆ’ ಎಂದೂ ಹೇಳಿದರು.

‘ಸಹಾಯವಾಣಿ ಜೊತೆ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವೆಬ್‌ಸೈಟ್‌ನಲ್ಲಿ ರಷ್ಯನ್‌ ಭಾಷೆಯ ಇಂಟರ್‌ಫೇಸ್‌ ಸಹ ಇರಲಿದೆ. ಈ ಉಪಕ್ರಮಗಳು ಮುಂದಿನ ತಿಂಗಳು ಕಾರ್ಯರೂಪಕ್ಕೆ ಬರಲಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.