ADVERTISEMENT

ವಿಶ್ವದ ಅತಿದೊಡ್ಡ ನೀಲಮಣಿ ರತ್ನ ಶ್ರೀಲಂಕಾದಲ್ಲಿ ಪತ್ತೆ!

ರಾಯಿಟರ್ಸ್
Published 12 ಡಿಸೆಂಬರ್ 2021, 12:57 IST
Last Updated 12 ಡಿಸೆಂಬರ್ 2021, 12:57 IST
ಶ್ರೀಲಂಕಾದಲ್ಲಿ ಪತ್ತೆಯಾಗಿರುವ ನೀಲಮಣಿ (ಐಎಎನ್‌ಎಸ್‌ ಚಿತ್ರ)
ಶ್ರೀಲಂಕಾದಲ್ಲಿ ಪತ್ತೆಯಾಗಿರುವ ನೀಲಮಣಿ (ಐಎಎನ್‌ಎಸ್‌ ಚಿತ್ರ)    

ಕೊಲಂಬೊ: ವಿಶ್ವದ ಅತಿದೊಡ್ಡ, 310 ಕಿಲೋ ಗ್ರಾಂ ತೂಕದ ನೈಸರ್ಗಿಕ ನೀಲಮಣಿಯೊಂದು ಮೂರು ತಿಂಗಳ ಹಿಂದೆ ರತ್ನದ ಗಣಿಯಲ್ಲಿ ಸಿಕ್ಕಿರುವುದಾಗಿ ಶ್ರೀಲಂಕಾದ ಅಧಿಕಾರಿಗಳು ಭಾನುವಾರ ಘೋಷಿಸಿದ್ದಾರೆ.

ನೀಲಮಣಿಯನ್ನು ಪರೀಕ್ಷಿಸಿದ ಸ್ಥಳೀಯ ರತ್ನಶಾಸ್ತ್ರಜ್ಞರು, 300 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವಿರುವುದರಿಂದ ಇದು ವಿಶ್ವದ ಅಪರೂಪದ ರತ್ನಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಅಂತರರಾಷ್ಟ್ರೀಯ ಸಂಸ್ಥೆಗಳು ಈ ರತ್ನವನ್ನು ಇನ್ನಷ್ಟೇ ಪ್ರಮಾಣಿಕರಿಸಬೇಕಾಗಿದೆ.

ಕೊಲಂಬೊ ಹೊರವಲಯದ ಹೊರಾಣ ಎಂಬಲ್ಲಿರುವ ರತ್ನದ ಗಣಿ ಮಾಲೀಕರೊಬ್ಬರ ಮನೆಯಲ್ಲಿ ನೀಲಮಣಿಯನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ರತ್ನವನ್ನು ಅನಾವರಣಗೊಳಿಸುವುದಕ್ಕೂ ಮೊದಲು ಬೌದ್ಧ ಬಿಕ್ಕುಗಳು ಅದಕ್ಕೆ ಆಶೀರ್ವಾದ ಪಠಣ ಮಾಡಿದರು.

ADVERTISEMENT

ರತ್ನಗಳಿಂದ ಸಮೃದ್ಧವಾಗಿರುವ ಶ್ರೀಲಂಕಾದ ರತ್ನಪುರ ಎಂಬಲ್ಲಿ ಈ ನೀಲಮಣಿ ಪತ್ತೆಯಾಗಿದೆ. ಇದೇ ಜಾಗದಲ್ಲಿ ಸ್ಥಳೀಯರಿಗೆ ಹಿಂದೊಮ್ಮೆ ಅತಿದೊಡ್ಡ ನಕ್ಷತ್ರ ನೀಲಮಣಿ ಪತ್ತೆಯಾಗಿತ್ತು.

ರತ್ನಪುರವನ್ನು ಶ್ರೀಲಂಕಾದ ರತ್ನದ ರಾಜಧಾನಿ ಎಂದೂ ಕರೆಯಲಾಗುತ್ತದೆ. ಇಲ್ಲಿಂದ ನೀಲಮಣಿ ಮತ್ತು ಇತರ ಅಮೂಲ್ಯ ರತ್ನಗಳು ರಫ್ತಾಗುತ್ತವೆ.

ರತ್ನಗಳು, ವಜ್ರಗಳು ಮತ್ತು ಇತರ ಆಭರಣಗಳ ರಫ್ತಿನ ಮೂಲಕ ದೇಶವು ಕಳೆದ ವರ್ಷ ಸುಮಾರು ಅರ್ಧ ಶತಕೋಟಿ ಡಾಲರ್ ಗಳಿಸಿದೆ ಎಂದು ಸ್ಥಳೀಯ ರತ್ನ ಮತ್ತು ಆಭರಣ ಉದ್ಯಮ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.