ADVERTISEMENT

ಶ್ರೀಲಂಕಾ: ಆರ್ಥಿಕ ಬಿಕ್ಕಟ್ಟಿನ ನಡುವೆ ಇಂದು ಹೊಸ ಸಚಿವ ಸಂಪುಟ ರಚನೆ ಸಾಧ್ಯತೆ

ಪಿಟಿಐ
Published 4 ಏಪ್ರಿಲ್ 2022, 7:23 IST
Last Updated 4 ಏಪ್ರಿಲ್ 2022, 7:23 IST
   

ಕೊಲಂಬೊ: ದ್ವೀಪ ರಾಷ್ಟ್ರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ಸಂಕಷ್ಟಗಳ ವಿರುದ್ಧ ಕೆರಳಿರುವ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಜನರ ಕೋಪಕ್ಕೆ ಮಣಿದು ಸಂಪುಟದ 26 ಸಚಿವರು ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಸಿದಿರುವ ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಇಂದೇ(ಸೋಮವಾರ) ಸಂಪುಟಕ್ಕೆ ಹೊಸ ಸಚಿವರ ಸೇರ್ಪಡೆಯಾಗುವ ನಿರೀಕ್ಷೆಯಿದೆ.

ಭಾನುವಾರ ರಾತ್ರಿ ಸಂಪುಟದ 26 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ಕುರಿತಂತೆ, ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಿಕ್ಷಣ ಸಚಿವ ಮತ್ತು ಸಭಾನಾಯಕ ದಿನೇಶ್ ಗುಣವರ್ಧನ, ಸಂಪುಟ ಸಚಿವರು ತಮ್ಮ ರಾಜೀನಾಮೆಯನ್ನು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರಿಗೆ ನೀಡಿದ್ದಾರೆ. ಸಾಮೂಹಿಕ ರಾಜೀನಾಮೆಗೆ ಅವರು ಯಾವುದೇ ಕಾರಣವನ್ನು ನೀಡಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಸೋಮವಾರ ತಮ್ಮ ಕಿರಿಯ ಸಹೋದರ ಮತ್ತು ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ಭೇಟಿಯಾಗಲಿದ್ದಾರೆ ಎಂದು ಅವರು ಹೇಳಿದರು.

‘ನಾವು ದೇಶದ ಪರಿಸ್ಥಿತಿಯ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದೇವೆ. ಸದ್ಯದ ಇಂಧನ ಮತ್ತು ವಿದ್ಯುತ್ ಬಿಕ್ಕಟ್ಟಿಗೆ ಪರಿಹಾರವಿದೆ’ಎಂದು ಗುಣವರ್ಧನ ಹೇಳಿದರು.

ಆರ್ಥಿಕ ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದಕ್ಕಾಗಿ ದ್ವೀಪ ರಾಷ್ಟ್ರದ ಸರ್ಕಾರದ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

1948 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರ ದೇಶವು ಅನುಭವಿಸುತ್ತಿರುವ ಕೆಟ್ಟ ಆರ್ಥಿಕ ಬಿಕ್ಕಟ್ಟು ಎಂದು ಹೇಳಲಾಗುತ್ತದೆ. ಇಂಧನ ಆಮದುಗಳಿಗೆ ಪಾವತಿಸಲು ವಿದೇಶಿ ಕರೆನ್ಸಿಯ ಕೊರತೆಯಿಂದ ಈ ಸಂಕಷ್ಟ ತಲೆದೋರಿದೆ.

ಜನರು ಇಂಧನ, ಅಡುಗೆ ಅನಿಲಕ್ಕಾಗಿ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವ ಜೊತೆಗೆ ಹಲವಾರು ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ಸಹಿಸಿಕೊಳ್ಳುತ್ತಿದ್ದಾರೆ.ಹೀಗಾಗಿ, ಪಕ್ಷ ಭೇದವಿಲ್ಲದೆ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಜನವರಿ ಮಧ್ಯ ಭಾಗದಿಂದ ವಿಸ್ತರಿಸಲಾದ ಭಾರತೀಯ ಆರ್ಥಿಕ ಪರಿಹಾರವು ಲಂಕಾಗೆ ತಾತ್ಕಾಲಿಕ ಪರಿಹಾರವನ್ನು ಮಾತ್ರ ಒದಗಿಸಿದೆ.

ಆದರೆ, ಅಧ್ಯಕ್ಷ ರಾಜಪಕ್ಸೆ ಅವರು ತಮ್ಮ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ. ವಿದೇಶಿ ವಿನಿಮಯ ಬಿಕ್ಕಟ್ಟು ನಮ್ಮಿಂದ ಆದದ್ದಲ್ಲ. ಕೊರೊನಾ ಸಾಂಕ್ರಾಮಿಕದಿಂದಾಗಿ ದ್ವೀಪದ ಪ್ರವಾಸೋದ್ಯಮ ಆದಾಯ ಮತ್ತು ಆಂತರಿಕ ಹಣದ ವಹಿವಾಟು ಕ್ಷೀಣಿಸಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.