ADVERTISEMENT

ಶ್ರೀಲಂಕಾ ಪೈಲಟ್‌ಗಳ ಸಮಯಪ್ರಜ್ಞೆ: ಆಗಸದಲ್ಲಿ ತಪ್ಪಿದ ವಿಮಾನಗಳ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 20:10 IST
Last Updated 15 ಜೂನ್ 2022, 20:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ:ಲಂಡನ್‌– ಕೊಲಂಬೊ ಮಾರ್ಗವಾಗಿ ತೆರಳುತ್ತಿದ್ದ ಶ್ರೀಲಂಕಾ ಏರ್‌ಲೈನ್ಸ್ ವಿಮಾನದ ಪೈಲಟ್‌ಗಳ ಸಮಯಪ್ರಜ್ಞೆಯಿಂದಾಗಿ ಟರ್ಕಿ ವಾಯು ಪ್ರದೇಶದಲ್ಲಿ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಡಿಕ್ಕಿ ಹೊಡೆಯುವುದು ತಪ್ಪಿದೆ.

ಇದೇ 13ರಂದು 275 ಪ್ರಯಾಣಿಕರಿದ್ದ ವಿಮಾನ ಹೀಥ್ರೂನಿಂದ ಕೊಲಂಬೊಗೆ ತೆರಳುವ ಮಾರ್ಗದಲ್ಲಿ ಟರ್ಕಿ ವಾಯುಪ್ರದೇಶ ಪ್ರವೇಶಿಸಿತ್ತು. ವಾಯು ಸಂಚಾರ ನಿಯಂತ್ರಣದಿಂದ ಶ್ರೀಲಂಕಾ ವಿಮಾನಕ್ಕೆ 33 ಸಾವಿರ ಅಡಿಗಳಿಂದ 35 ಸಾವಿರ ಅಡಿಗೇರಲು ಹೇಳಲಾಯಿತು. ಆದರೆ ಅದೇ ಎತ್ತರದಲ್ಲಿ ಎದುರಿನಿಂದ ಬ್ರಿಟಿಷ್‌ ಏರ್‌ವೇಸ್‌ ವಿಮಾನವೂ ಬರುತ್ತಿತ್ತು. ಶ್ರೀಲಂಕಾ ವಿಮಾನದ ಪೈಲಟ್‌ಗಳು 15 ಮೈಲು ದೂರದಲ್ಲೇ ಇದನ್ನು ಗಮನಿಸಿ ತಮ್ಮ ವಿಮಾನವನ್ನು 35 ಸಾವಿರ ಅಡಿಗೆ ಏರದಿರಲು ನಿರಾಕರಿಸಿದರು.

ಅಂಕಾರಾ ವಾಯು ಸಂಚಾರ ನಿಯಂತ್ರಣದಿಂದ ಎರಡು ಬಾರಿ ಸೂಚನೆ ಬಂದರೂ ಶ್ರೀಲಂಕಾ ಪೈಲಟ್‌ಗಳು ತಮ್ಮ ನಿರ್ಧಾರಕ್ಕೇ ಅಂಟಿಕೊಂಡರು ಹಾಗೂ ಎದುರುಗಡೆಯಿಂದ ವಿಮಾನ ಬರುತ್ತಿರುವ ಮಾಹಿತಿ ನೀಡಿದರು. ಬಳಿಕ ತುರ್ತಾಗಿ ಪ್ರತಿಕ್ರಿಯಿಸಿದ ವಾಯು ಸಂಚಾರ ನಿಯಂತ್ರಣ, 35,000 ಅಡಿಗಳ ಮೇಲೆ ಈಗಾಗಲೇ ಬ್ರಿಟಿಷ್ ಏರ್‌ವೇಸ್ ವಿಮಾನ ಇರುವುದರಿಂದ ಶ್ರೀಲಂಕಾದ ವಿಮಾನ ಏರದಂತೆ ತಿಳಿಸಿತು.

ADVERTISEMENT

ಒಂದು ವೇಳೆ ವಿಮಾನ 35 ಸಾವಿರ ಅಡಿ ಎತ್ತರಕ್ಕೇರಿದ್ದರೆ ವಿಮಾನಗಳ ನಡುವೆ ಡಿಕ್ಕಿ ಸಂಭವಿಸುತ್ತಿತ್ತು ಎಂದು ಡೈಲಿ ಮಿರರ್ ಪತ್ರಿಕೆ ವರದಿ ಮಾಡಿದೆ.

ಪೈಲಟ್‌ಗಳ ಜಾಗರೂಕತೆ, ವಿಮಾನದಲ್ಲಿನ ಅತ್ಯಾಧುನಿಕ ಸಂವಹನ ಮತ್ತು ಕಣ್ಗಾವಲು ವ್ಯವಸ್ಥೆಯಿಂದ ಯುಎಲ್ 504 ವಿಮಾನ ಸುರಕ್ಷಿತವಾಗಿ ಕೊಲಂಬೊದಲ್ಲಿ ಇಳಿದಿದೆ. ಪ್ರಯಾಣಿಕರು, ಸಿಬ್ಬಂದಿ ಸುರಕ್ಷತೆಗೆ ಸಮಯೋಚಿತ ನಡೆ ಅನುಸರಿಸಿದ ಪೈಲಟ್‌ಗಳ ಕ್ರಮವನ್ನು ಶ್ರೀಲಂಕಾ ಏರ್ ಲೈನ್ಸ್ ಶ್ಲಾಘಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.