ADVERTISEMENT

ಆರ್ಥಿಕ ಬಿಕ್ಕಟ್ಟಿನ ಲಂಕಾದಲ್ಲಿ ಹೊಸ ವರ್ಷ: ಸಿಹಿ ಹಂಚಿ ಪ್ರತಿಭಟನೆ

ಪಿಟಿಐ
Published 14 ಏಪ್ರಿಲ್ 2022, 17:44 IST
Last Updated 14 ಏಪ್ರಿಲ್ 2022, 17:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ: ಶ್ರೀಲಂಕಾವು ಹೊಸ ವರ್ಷದ ಸಂಭ್ರಮದಲ್ಲಿದ್ದರೂ, ಆರ್ಥಿಕ ಬಿಕ್ಕಟ್ಟಿನಿಂದಾಗಿ ಆಚರಿಸುವ ಮನಸ್ಥಿತಿಯಲ್ಲಿ ಜನರು ಇಲ್ಲವಾಗಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರು ಗಣ್ಯ ವ್ಯಕ್ತಿಗಳ ಮನೆಗಳ ಮುಂದೆಯೇ ಬಿಸಿ ಹಾಲು ಮತ್ತು ಸಿಹಿ ಹಂಚುವ ಮೂಲಕ ಗುರುವಾರ ಹೊಸ ವರ್ಷವನ್ನು ಸ್ವಾಗತಿಸಿದರು.

ದೇಶದ ಭೀಕರ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲವಾಗಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಅವರ ಕುಟುಂಬದ ಪ್ರಬಲ ಸಚಿವರ ರಾಜೀನಾಮೆಗೆ ಆಗ್ರಹಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಗುರುವಾರ ಆರನೇ ದಿನಕ್ಕೆ ಕಾಲಿಟ್ಟಿತ್ತು.ಪ್ರಧಾನಿ ಮಹಿಂದಾ ರಾಜಪಕ್ಸ ಅವರ ಮಾತುಕತೆ ಪ್ರಸ್ತಾಪವನ್ನು ತಿರಸ್ಕರಿಸಿರುವ ಪ್ರತಿಭಟನಕಾರರು ಗೊಟಬಯ ಮತ್ತು ಅಧಿಕಾರದಲ್ಲಿರುವ ಅವರ ಕುಟುಂಬದ ಸದಸ್ಯರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ವಿರೋಧ ‍ಪಕ್ಷದಿಂದ ಪ್ರತಿಭಟನಾ ಜಾಥಾ: ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಲು ಮುಂದಿನ ವಾರ ಮೂರು ದಿನಗಳ ಕಾಲ ಪ್ರತಿಭಟನಾ ಜಾಥಾ ನಡೆಸಲು ಶ್ರೀಲಂಕಾದ ಪ್ರಮುಖ ವಿರೋಧ ಪಕ್ಷ ಜನತಾ ವಿಮುಕ್ತಿ ಪೆರಮುನಾ (ಜೆವಿಪಿ) ನಿರ್ಧರಿಸಿದೆ.

ADVERTISEMENT

ದೇಶದ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ವಿಫಲವಾಗಿರುವ ಗೊಟಬಯ ನೇತೃತ್ವದ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಅಡ್ಡದಾರಿ ಮೂಲಕ ಅಧಿಕಾರದಲ್ಲಿ ಉಳಿಯಲು ಪ್ರಯತ್ನ ನಡೆಸುತ್ತಿದೆ ಎಂದು ಜೆವಿಪಿ ಆರೋಪಿಸಿದೆ.

’ಜಯಕ್ಕಾಗಿ ಹೋರಾಟ‘ ವಾಕ್ಯದಡಿ ಏಪ್ರಿಲ್‌ 17ರಿಂದ 19ರ ವರೆಗೆ ಬೃಹತ್‌ ಪ್ರತಿಭಟನಾ ಜಾಥಾ ನಡೆಸಲಾಗುವುದು. ಇದು ದೇಶದ ಇತಿಹಾಸದಲ್ಲಿಯೇ ಅತಿ ದೊಡ್ಡ ಬೃಹತ್ ಜಾಥಾವಾಗಲಿದೆ ಎಂದು ಜೆವಿಪಿ ಪ್ರಧಾನ ಕಾರ್ಯದರ್ಶಿ ತಿಲ್ವನ್‌ ಸಿಲ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.