ADVERTISEMENT

ಲಂಕಾದಲ್ಲಿ ಮಧ್ಯಂತರ ಸರ್ಕಾರ, ಹೊಸ ಪ್ರಧಾನಿ?

ರಾಯಿಟರ್ಸ್
Published 11 ಏಪ್ರಿಲ್ 2022, 13:21 IST
Last Updated 11 ಏಪ್ರಿಲ್ 2022, 13:21 IST
ಕೊಲಂಬೊದಲ್ಲಿ ಎಲ್‌ಪಿಜಿ ಸಿಲಿಂಡರ್‌ ಪಡೆದುಕೊಳ್ಳಲು ಸೋಮವಾರ ಸರದಿಯಲ್ಲಿ ನಿಂತಿದ್ದ ಜನರು  –ಎಎಫ್‌ಪಿ ಚಿತ್ರ
ಕೊಲಂಬೊದಲ್ಲಿ ಎಲ್‌ಪಿಜಿ ಸಿಲಿಂಡರ್‌ ಪಡೆದುಕೊಳ್ಳಲು ಸೋಮವಾರ ಸರದಿಯಲ್ಲಿ ನಿಂತಿದ್ದ ಜನರು  –ಎಎಫ್‌ಪಿ ಚಿತ್ರ   

ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಒಕ್ಕೂಟ ಆಡಳಿತ ಪ್ರಸ್ತಾವ ಮುಂದಿಟ್ಟ ವಾರದ ಬಳಿಕ, ಮಧ್ಯಂತರ ಸರ್ಕಾರವೊಂದನ್ನು ರಚಿಸುವ ಸಂಬಂಧ ಮೈತ್ರಿಕೂಟದ ಮೂವರು ಸದಸ್ಯರು ಪ್ರಸ್ತಾವ ಮುಂದಿಟ್ಟಿದ್ದು, ಪ್ರಧಾನಿಯನ್ನೂ ಬದಲಿಸಿಬೇಕು ಎಂದು ಒತ್ತಾಯಿಸಿದ್ದಾರೆ.

‘ಪ್ರಧಾನಿ ಮಹಿಂದಾ ರಾಜಪಕ್ಸ ಅವರನ್ನು ಬದಲಿಸಿ ನೂತನ ಪ್ರಧಾನಿಯನ್ನು ಆಯ್ಕೆ ಮಾಡಬೇಕು, ಪ್ರಮುಖ ನಿರ್ಧಾರ ಕೈಗೊಳ್ಳುವುದಕ್ಕಾಗಿ ಎಲ್ಲ ಪಕ್ಷಗಳನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು, ಕನಿಷ್ಠ ಸಂಖ್ಯೆಯಲ್ಲಿ ಸಂಪುಟ ಸಚಿವರು ಇರಬೇಕು’ ಎಂಬ ಪ್ರಸ್ತಾವವನ್ನು ಮುಂದಿಡಲಾಗಿದೆ ಎಂದು ಜಾತಿಕಾ ಹೆಳ ಉರುಮಾಯ ಪಕ್ಷದ ಅಧ್ಯಕ್ಷ ಉದಯ ಗಮನ್‌ಪಿಲ ಹೇಳಿದ್ದಾರೆ.

‘ಚುನಾವಣೆ ನಡೆಯುವುದಕ್ಕೆ ಮೊದಲಾಗಿ ಈ ಬದಲಾವಣೆ ಆಗಬೇಕು, ಆರ್ಥಿಕತೆಯನ್ನು ಮತ್ತೆ ಪುನಶ್ಚೇತನಗೊಳಿಸಲು ಇದು ಅಗತ್ಯ’ ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

ಈ ಮಧ್ಯೆ, ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಂತರ ಸರ್ಕಾರ ರಚಿಸುವ ಸಂಬಂಧ ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಪಕ್ಷೇತರ ಸಂಸದರ ನಡುವೆ ನಡೆದ ಮಾತುಕತೆ ಅಪೂರ್ಣಗೊಂಡಿದೆ.

ಆಡಳಿತಾರೂಢ ಎಸ್‌ಎಲ್‌ಪಿಪಿ ಮೈತ್ರಿಕೂಟದಲ್ಲಿ 11 ಪಕ್ಷಗಳಿದ್ದು, 42 ಮಂದಿ ಪಕ್ಷೇತರ ಸಂಸತ್ ಸದಸ್ಯರೂ ಇದ್ದಾರೆ. ಕಳೆದ ವಾರ ಈ ಎಲ್ಲ ಸದಸ್ಯರು ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂದೆಗೆದುಕೊಂಡಿದ್ದರೂ, ವಿರೋಧ ಪಕ್ಷವನ್ನು ಸೇರಿಕೊಳ್ಳಲು ನಿರಾಕರಿಸಿದ್ದರು.

ಮತ್ತೊಂದೆಡೆಯಲ್ಲಿ, ಸರ್ಕಾರದ ವಿರುದ್ಧ ಶನಿವಾರದಿಂದ ಆರಂಭವಾಗಿರುವ ಪ್ರತಿಭಟನೆ ಸೋಮವಾರವೂ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.