ADVERTISEMENT

ದಾಳಿ ನಡೆಸಿದ್ದು ನಾವೇ

ಶ್ರೀಲಂಕಾ ಸ್ಫೋಟ: ಹೊಣೆ ಹೊತ್ತ ಐಸಿಸ್‌ ಸಂಘಟನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 20:00 IST
Last Updated 23 ಏಪ್ರಿಲ್ 2019, 20:00 IST
ಶ್ರೀಲಂಕಾದಲ್ಲಿ ಸರಣಿ ಬಾಂಬ್‌ ಸ್ಫೋಟದ ನಂತರ ಕಟ್ಟೆಚ್ಚರ ವಹಿಸಲಾಗಿದ್ದು, ಮಂಗಳವಾರ ಯೋಧರು ಕೊಲಂಬೊದಲ್ಲಿ ತಪಾಸಣೆ ನಡೆಸಿದರು ಎಎಫ್‌ಪಿ ಚಿತ್ರ
ಶ್ರೀಲಂಕಾದಲ್ಲಿ ಸರಣಿ ಬಾಂಬ್‌ ಸ್ಫೋಟದ ನಂತರ ಕಟ್ಟೆಚ್ಚರ ವಹಿಸಲಾಗಿದ್ದು, ಮಂಗಳವಾರ ಯೋಧರು ಕೊಲಂಬೊದಲ್ಲಿ ತಪಾಸಣೆ ನಡೆಸಿದರು ಎಎಫ್‌ಪಿ ಚಿತ್ರ   

ಕೊಲಂಬೊ (ಪಿಟಿಐ): ಈಸ್ಟರ್‌ ದಿನ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರ ಸಂಘಟನೆ ಹೊತ್ತುಕೊಂಡಿದೆ.

‘ಶ್ರೀಲಂಕಾದಲ್ಲಿ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದವರು ನಮ್ಮ ಸಂಘಟನೆಯವರೇ’ ಎಂದು ಐಸಿಸ್‌ ಪ್ರಕಟಣೆ ತಿಳಿಸಿರುವುದಾಗಿ ‘ಅಮಾಖ್‌’ ಸುದ್ದಿ ಸಂಸ್ಥೆ ಹೇಳಿದೆ.

‘ಅಬು ಉಬಾಯ್ದ, ಅಬು ಅಲ್‌–ಮುಖ್ತರ್‌, ಅಬು ಖಲೀಲ್‌, ಅಬು ಹಮ್ಝಾ, ಅಬು ಅಲ್‌ ಬರಾ, ಅಬು ಮುಹಮದ್‌ ಮತ್ತು ಅಬು ಅಬ್ದುಲ್ಲಾ ದಾಳಿ ನಡೆಸಿದ ಏಳು ಆತ್ಮಹತ್ಯಾ ಬಾಂಬರ್‌ಗಳು’ ಎಂದು ಅದು ಗುರುತಿಸಿದೆ.

ADVERTISEMENT

ಅಲ್ಲದೆ, ದಾಳಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಅದು ಹೇಳಿಕೊಂಡಿದೆ.

ಪ್ರಕರಣ ಸಂಬಂಧ ಈವರೆಗೆ 40 ಶಂಕಿತರನ್ನು ಬಂಧಿಸಲಾಗಿದೆ. ಅಲ್ಲದೆ, ದೇಶದಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ.

ಎನ್‌ಟಿಜೆ ನಿಷೇಧಕ್ಕೆ ಪ್ರಸ್ತಾವ: ‘ದಾಳಿ ನಡೆಸಿದ ಎಲ್ಲ ಆತ್ಮಹತ್ಯಾ ಬಾಂಬರ್‌ಗಳು ಶ್ರೀಲಂಕಾದವರೇ. ಆದರೆ, ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಅವರು ಸಂಪರ್ಕ ಹೊಂದಿದ್ದ ಸಾಧ್ಯತೆ ಇದೆ’ ಎಂದುಶ್ರೀಲಂಕಾದ ರಕ್ಷಣಾ ಸಚಿವ ರುವಾನ್‌ ವಿಜೆವರ್ದನೆ ಸಂಸತ್ತಿನಲ್ಲಿ ಹೇಳಿದ್ದಾರೆ.

‘ದಾಳಿಯಲ್ಲಿ ನ್ಯಾಷನಲ್‌ ತೌಫೀಕ್‌ ಜಮಾತ್‌ (ಎನ್‌ಟಿಜೆ) ಉಗ್ರ ಸಂಘಟನೆ ಕೈವಾಡವಿರುವ ಶಂಕೆಯಿದೆ’ ಎಂದ ಅವರು, ಈ ಸಂಘಟನೆಯನ್ನು ನಿಷೇಧಿಸುವ ಪ್ರಸ್ತಾವವನ್ನು ಸಂಸತ್ತಿನ ಮುಂದಿಟ್ಟರು.

ಸಾವಿನ ಸಂಖ್ಯೆ 321ಕ್ಕೆ ಏರಿಕೆ: ಸರಣಿ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ 321ಕ್ಕೆ ಏರಿದೆ. ಈ ಪೈಕಿ 10 ಭಾರತೀಯರೂ ಬಲಿಯಾಗಿದ್ದಾರೆ.ಒಟ್ಟು 38 ವಿದೇಶಿಯರು ಅಸುನೀಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಂಗಳವಾರ ರಾಷ್ಟ್ರೀಯ ಶೋಕ ದಿನ ಎಂದು ಘೋಷಿಸಿದ್ದ ಸರ್ಕಾರ, 3 ನಿಮಿಷ ಮೌನಾಚರಣೆ ಮೂಲಕ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.