ADVERTISEMENT

ಶ್ರೀಲಂಕಾ: ಮತ್ತೆ ದಾಳಿ ಸಾಧ್ಯತೆ

ಭದ್ರತಾ ಅಧಿಕಾರಿಗಳ ಎಚ್ಚರಿಕೆ l ಕಠಿಣ ಕ್ರಮಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 15:55 IST
Last Updated 29 ಏಪ್ರಿಲ್ 2019, 15:55 IST
ಶ್ರೀಲಂಕಾ ಬಾಂಬ್ ದಾಳಿ (ಫೈಲ್ ಚಿತ್ರ)
ಶ್ರೀಲಂಕಾ ಬಾಂಬ್ ದಾಳಿ (ಫೈಲ್ ಚಿತ್ರ)   

ಕೊಲಂಬೊ:ಸೇನೆಯ ಸಮವಸ್ತ್ರ ಧರಿಸಿ ಶ್ರೀಲಂಕಾದಲ್ಲಿ ಮತ್ತೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

‘ಸೇನಾ ಸಮವಸ್ತ್ರ ಧರಿಸಿ, ವ್ಯಾನ್‌ ಮೂಲಕ ಉಗ್ರರು ಮತ್ತೊಂದು ದಾಳಿ ನಡೆಸುವ ಸಾಧ್ಯತೆ ಇದೆ’ ಎಂದು ಪೊಲೀಸ್‌ ಇಲಾಖೆಯ ಸಚಿವಾಲಯದ ಭದ್ರತಾ ವಿಭಾಗ (ಎಂಎಸ್‌ಡಿ) ಅಧಿಕಾರಿ
ಗಳಿಗೆ ಹಾಗೂ ಸಂಸದರಿಗೆ ಬರೆದ ಪತ್ರದಲ್ಲಿ ಹೇಳಲಾಗಿದೆ. ಆರೋಗ್ಯ ಸಚಿವ ರಜಿತ ಸೇನಾರತ್ನೆ ಅವರು ದಾಳಿ ನಡೆಯುವ ಬಗ್ಗೆ ಎಂಎಸ್‌ಡಿ ಪತ್ರ ಬರೆದಿರುವುದನ್ನು ದೃಢಪಡಿಸಿದ್ದಾರೆ.

ಐದು ಶ್ವಾನ ಕೊಡುಗೆ: ಸ್ಫೋಟಕ ಪತ್ತೆ ಹಚ್ಚುವ ತರಬೇತಿಗಾಗಿ ಮಹಿಳೆ
ಯೊಬ್ಬರು ತಮ್ಮ ಜರ್ಮನ್‌ ಶೆಫರ್ಡ್‌ ತಳಿಯ ಐದು ಶ್ವಾನಗಳನ್ನು ಸೇನೆಗೆ ಕೊಡುಗೆಯಾಗಿ ನೀಡಿದ್ದಾರೆ.

ADVERTISEMENT

ಈಸ್ಟರ್‌ ಹಬ್ಬದಂದು ನಡೆದ ಸರಣಿ ಬಾಂಬ್‌ ದಾಳಿಯ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ. ಶಿರು ವಿಜೆಮನ್ನೆ ಅವರು ತಮ್ಮ ಶ್ವಾನಗಳನ್ನು ಸೇನೆಗೆ ನೀಡಿದ್ದಾರೆ ಎಂದು ‘ಕೊಲಂಬೊ ಪೇಜ್‌’ ವರದಿ ಮಾಡಿದೆ.

‘ಜಿಹಾದ್‌ ನಿರ್ಮೂಲನೆಗೆ ಕಠಿಣ ಕಾನೂನು’: ‘ಶ್ರೀಲಂಕಾದಿಂದ ಜಿಹಾದ್‌ ಮತ್ತು ಭಯೋತ್ಪಾದಕತೆಯನ್ನು ನಿರ್ಮೂಲನೆ ಮಾಡಲು ಕಠಿಣವಾದ ಹೊಸ ಕಾನೂನು ಜಾರಿಗೆ ತರುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆ ಆಗಿದೆ’ ಎಂದು ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ.

ಭಯೋತ್ಪಾದನಾ ನಿಗ್ರಹ ಹೊಸ ಮಸೂದೆಯಲ್ಲಿ ಇಂಥ ಕಾನೂನು ಸೇರಿಸಲಾಗಿದೆ. ಆದರೆ, ಈ ಮಸೂದೆ ತಿಂಗಳಿನಿಂದ ಸಂಸತ್ತಿನಲ್ಲಿ ಹಾಗೆಯೇ ಉಳಿದಿದೆ. ಈ ಮಸೂದೆ ಅಂಗೀಕಾರವಾಗಿದ್ದರೆ, ಈಸ್ಟರ್‌ ಭಾನುವಾರದಂದು ನಡೆದ ಆತ್ಮಹತ್ಯಾ ಬಾಂಬ್‌ ದಾಳಿಯನ್ನು ತಡೆಯಬಹುದಿತ್ತು ಎಂದು ಅವರು ಹೇಳಿರುವುದಾಗಿ ‘ಡೇಲಿ ಮಿರರ್‌’ ವರದಿ ಮಾಡಿದೆ.

‘ಬೌದ್ಧ ದೇಗುಲಗಳ ಮೇಲೆ ದಾಳಿ ಸಾಧ್ಯತೆ’

ಕೊಲಂಬೊ (ಪಿಟಿಐ):ಶ್ರೀಲಂಕಾದ ಬೌದ್ಧ ದೇವಾಲಯಗಳ ಮೇಲೆ ಮಹಿಳಾ ಬಾಂಬರ್‌ಗಳುಭಕ್ತರ ಸೋಗಿನಲ್ಲಿ ದಾಳಿ ನಡೆಸಲು ಯೋಜಿಸಿರುವ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ದೊರೆತಿದೆಎಂದು ಮಾಧ್ಯಮ ವರದಿ ಮಾಡಿದೆ.

ನಿಷೇಧಿತ ಸ್ಥಳೀಯ ಭಯೋತ್ಪಾದಕ ಸಂಘಟನೆ ನ್ಯಾಷನಲ್‌ ತೌಹೀದ್‌ ಜಮಾತ್‌ನ (ಎನ್‌ಟಿಜೆ) ಮಹಿಳಾ ಬಾಂಬರ್‌ಗಳು ಬೌದ್ಧ ದೇವಾಲಯದ ಮೇಲೆ ದಾಳಿ ನಡೆಸುವ ಸಾಧ್ಯತೆ ಕುರಿತು ಶ್ರೀಲಂಕಾದ ಗುಪ್ತಚರ ಇಲಾಖೆಗೆ ಮಾಹಿತಿ ದೊರೆತಿದೆ. ಪೂರ್ವ ಪ್ರಾಂತ್ಯದ ಸೈಂತಮರುತು ಪ್ರದೇಶದ ಮನೆ ಮೇಲೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ವಶಪಡಿಸಿಕೊಂಡಿರುವಬಿಳಿ ಸ್ಕರ್ಟ್‌ ಮತ್ತು ಬ್ಲೌಸ್‌, ಮಹಿಳಾ ಬಾಂಬರ್‌ಗಳು ಭಕ್ತರ ಸೋಗಿನಲ್ಲಿ ದಾಳಿ ನಡೆಸುವ ಸಾಧ್ಯತೆಯನ್ನು ಸೂಚಿಸಿದೆ ಎಂದು ‘ಡೈಲಿ ಮಿರರ್‌’ ವರದಿ ಮಾಡಿದೆ.

ಮಾರ್ಚ್‌ 29ರಂದು ಮುಸ್ಲಿಂ ಮಹಿಳೆಯೊಬ್ಬರು ₹ 11,000 ನೀಡಿ 9 ಜೊತೆ ಇಂತಹ ಶ್ವೇತ ವಸ್ತ್ರಗಳನ್ನು ಖರೀದಿಸಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ವರದಿ ಹೇಳಿದೆ.ಇದುವರೆಗೆ ದಾಳಿ ನಡೆಸಿದ ಮನೆಯಿಂದ ಅಧಿಕಾರಿಗಳು ಐದು ಜೊತೆ ವಸ್ತ್ರಗಳನ್ನು ವಶಪಡಿಸಿಕೊಂಡಿ
ದ್ದಾರೆ. ಉಳಿದ ಬಟ್ಟೆಗಳಿಗಾಗಿ ಗುಪ್ತಚರ ಇಲಾಖೆ ಶೋಧ ನಡೆಸಿದೆ.ಈಸ್ಟರ್ ದಿನದಂದು ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ ಒಬ್ಬ ಮಹಿಳಾ ಬಾಂಬರ್‌ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.