ADVERTISEMENT

ಉಕ್ರೇನ್ ಮೇಲೆ ಯುದ್ಧ: ರಷ್ಯಾಕ್ಕೆ ವಿಮಾನಯಾನ ಸೇವೆ ರದ್ಧುಗೊಳಿಸಿದ ಶ್ರೀಲಂಕಾ

ಪಿಟಿಐ
Published 28 ಮಾರ್ಚ್ 2022, 12:59 IST
Last Updated 28 ಮಾರ್ಚ್ 2022, 12:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಲಂಬೊ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದೆ. ಹೀಗಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ಕಾರ್ಯಾಚರಣೆ ನಿರ್ಬಂಧಗಳ ಹಿನ್ನೆಲೆಯಲ್ಲಿ ಶ್ರೀಲಂಕಾದ ವಿಮಾನಯಾನ ಸಂಸ್ಥೆಯು ಮುಂದಿನ ಆದೇಶದವರೆಗೂ ತನ್ನ ದೇಶದಿಂದ ಮಾಸ್ಕೋಗೆ ಎಲ್ಲ ವಿಮಾನಗಳ ಸಂಚಾರವನ್ನು ಸೋಮವಾರ ರದ್ದುಗೊಳಿಸಿದೆ.

ವಿಮಾನಯಾನ ಸಂಸ್ಥೆಯು ಕೊಲಂಬೊ ಮತ್ತು ಮಾಸ್ಕೋ ನಡುವೆ ವಾರಕ್ಕೆ ಎರಡು ವಿಮಾನಗಳನ್ನು ನಿರ್ವಹಿಸುತ್ತಿತ್ತು.

'ಇಂದಿನಿಂದ (ಮಾ. 28) ಜಾರಿಗೆ ಬರುವಂತೆ ಶ್ರೀಲಂಕಾ ಮತ್ತು ರಷ್ಯಾ ನಡುವಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಶ್ರೀಲಂಕನ್ ಏರ್‌ಲೈನ್ಸ್ ಘೋಷಿಸಿದೆ' ಎಂದು ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ ರಷ್ಯಾಗೆ ವಿಮಾನ ಹಾರಾಟದ ಕಾರ್ಯಾಚರಣೆಗಳ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಈ ನಿರ್ಬಂಧ ವಿಧಿಸಿರುವುದಾಗಿ ಅದು ಹೇಳಿದೆ. ಅದರಂತೆ, ಶ್ರೀಲಂಕಾ ಏರ್‌ಲೈನ್ಸ್ ಮುಂದಿನ ಆದೇಶದ ಬರುವವರೆಗೆ ಮಾಸ್ಕೋಗೆ ವಿಮಾನ ಕಾರ್ಯಾಚರಣೆಯನ್ನು ನಿಲ್ಲಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

ರಷ್ಯಾದಲ್ಲಿನ ಪರಿಸ್ಥಿತಿ ಮೇಲೆ ನಿಗಾವಹಿಸುವುದನ್ನು ಮುಂದುವರಿಸುವುದಾಗಿ ಹೇಳಿರುವ ಏರ್‌ಲೈನ್, ಅಲ್ಲಿ ಪರಿಸ್ಥಿತಿ ಸುಧಾರಿಸಿದ ಬಳಿಕ ಮತ್ತೆ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಬಯಸಿದ್ದೇವೆ ಎಂದಿದೆ.

ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ರಷ್ಯಾ ಮೇಲೆ ನಿರ್ಬಂಧ ವಿಧಿಸುವ ಭಾಗವಾಗಿ ಹಲವಾರು ಇತರ ಜಾಗತಿಕ ವಿಮಾನಯಾನ ಸಂಸ್ಥೆಗಳು ಇತ್ತೀಚೆಗೆ ರಷ್ಯಾಕ್ಕೆ ವಿಮಾನಗಳನ್ನು ಸ್ಥಗಿತಗೊಳಿಸಿವೆ. ಕಳೆದ ತಿಂಗಳು ಅಮೆರಿಕ ನೇತೃತ್ವದಲ್ಲಿ ವಿಧಿಸಿದ ನಿರ್ಬಂಧಗಳಿಂದ ರಷ್ಯಾದ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಹೊಡೆತ ಬಿದ್ದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.