ಪಾಲಿಸೇಡ್ಸ್ ಪ್ರದೇಶವು ಅಗ್ನಿಗೆ ಆಹುತಿಯಾಗಿರುವ ದೃಶ್ಯ
ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಗಾಳಿಯು ವೇಗವಾಗಿ ಬೀಸುವ ಸಂಭವವಿದ್ದು, ಕಾಳ್ಗಿಚ್ಚು ನಂದಿಸುವ ಕೆಲಸಕ್ಕೆ ಹಿನ್ನಡೆ ಉಂಟಾಗುವ ಆತಂಕ ಎದುರಾಗಿದೆ.
ಈ ಮಧ್ಯೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ನೀರಿನ ಟ್ಯಾಂಕರ್‌ಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಅಪಾಯ ಹೆಚ್ಚಿರುವ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಕಾಳ್ಗಿಚ್ಚು ಹಬ್ಬಿರುವ ಪ್ರದೇಶಗಳಲ್ಲಿ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದ್ದು, ವಿಮಾನಗಳ ಮೂಲಕ ಮನೆಗಳು ಮತ್ತು ಪರ್ವತಗಳ ಮೇಲೆ ಅಗ್ನಿಶಾಮಕ ರಾಸಾಯನಿಕಗಳನ್ನು ಸುರಿಸಲಾಗುತ್ತಿದೆ.
‘ಗಾಳಿಯು ವೇಗವಾಗಿ ಬೀಸಿದಲ್ಲಿ, ಅದರಿಂದ ಉಂಟಾಗಬಹುದಾದ ಅಪಾಯ ಎದುರಿಸಲು ಸಿದ್ಧ’ ಎಂದು ಲಾಸ್ ಏಂಜಲೀಸ್ ಮೇಯರ್ ಕರೆನ್ ಬಾಸ್ ಮತ್ತು ಇತರ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊದಿಂದ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅತಿ ಹೆಚ್ಚು ಅಪಾಯವಿರುವ ಪ್ರದೇಶಗಳ ಜನರು ಕೂಡಲೇ ಮನೆಗಳನ್ನು ತೊರೆಯುವಂತೆ ಮತ್ತು ಸ್ಥಳಾಂತರ ಆದೇಶಕ್ಕಾಗಿ ಕಾಯದಿರುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಕಾಳ್ಗಿಚ್ಚಿನ ಬಳಿಕ ಆ ಪ್ರದೇಶದಲ್ಲಿ ಕಳವು ಮಾಡುತ್ತಿದ್ದ ಹಲವರನ್ನು ಬಂಧಿಸಲಾಗಿದೆ. ಈ ಮಧ್ಯೆ ಸಂತ್ರಸ್ತರ ಹೆಸರಿನಲ್ಲಿ ನಿಧಿ ಸಂಗ್ರಹ ಮಾಡುವ ವಂಚನೆ ನಡೆಯುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಲಾಸ್ ಏಂಜಲೀಸ್ ಕೌಂಟಿಯ ಜಿಲ್ಲಾ ಅಟಾರ್ನಿ ನಥನ್ ಹೊಚ್‌ಮನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.