ADVERTISEMENT

ಬೆಂಗಳೂರಿಗೂ ಭೇಟಿ ನೀಡಿದ್ದ ಶ್ರೀಲಂಕಾ ದಾಳಿಕೋರರು: ಮಹೇಶ್ ಸೇನಾನಾಯಕೆ ಹೇಳಿಕೆ

ಶ್ರೀಲಂಕಾ ಸೇನಾ ಮುಖ್ಯಸ್ಥರಿಂದ ಮಾಹಿತಿ

ಏಜೆನ್ಸೀಸ್
Published 4 ಮೇ 2019, 18:45 IST
Last Updated 4 ಮೇ 2019, 18:45 IST
   

ಕೊಲಂಬೊ: ‘ಈಸ್ಟರ್‌ ಭಾನುವಾರದಂದು (ಏ.21) ಸರಣಿ ಬಾಂಬ್‌ ಸ್ಫೋಟ ನಡೆಸಿದ್ದ ಕೆಲವು ಶಂಕಿತ ಆತ್ಮಾಹುತಿ ದಾಳಿಕೋರರು ಭಾರತದ ಕಾಶ್ಮೀರ, ಬೆಂಗಳೂರು ಮತ್ತು ಕೇರಳಕ್ಕೆ ಭೇಟಿ ನೀಡಿದ್ದರು’ ಎಂದು ಶ್ರೀಲಂಕಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಮಹೇಶ್ ಸೇನಾನಾಯಕೆ ಹೇಳಿದ್ದಾರೆ.

‘ತರಬೇತಿ ಪಡೆಯಲು ಅಥವಾ ಅಲ್ಲಿನ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಅವರು ಭಾರತ್ಕಕೆ ಭೇಟಿ ನೀಡಿರುವ ಸಾಧ್ಯತೆ ಇದೆ. ಈ ಬಗ್ಗೆ ನಿಖರ ಮಾಹಿತಿ ಇಲ್ಲ’ ಎಂದು ಬಿಬಿಸಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ದಾಳಿಕೋರರು ಭಾರತಕ್ಕೆ ಭೇಟಿ ನೀಡಿದ್ದಾರೆ ಎಂಬುದನ್ನು ಇದೇ ಮೊದಲ ಬಾರಿಗೆ ಶ್ರೀಲಂಕಾದ ಉನ್ನತ ಭದ್ರತಾ ಅಧಿಕಾರಿ ದೃಢಪಡಿಸಿದ್ದಾರೆ.

ADVERTISEMENT

‘ದಾಳಿಯಲ್ಲಿ ವಿದೇಶಿ ಭಯೋತ್ಪಾದಕಸಂಘಟನೆಗಳ ಪಾತ್ರ ಇದೆಯೇ ಎಂಬುದನ್ನು ತಿಳಿದುಕೊಳ್ಳಲು ದಾಳಿಕೋರರು ಸಂಚರಿಸಿರುವ ಪ್ರದೇಶಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಮತ್ತು ದಾಳಿ ನಡೆಸಲು ಅನುಸರಿಸಿದ್ದ ಕಾರ್ಯತಂತ್ರದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಸೇನಾನಾಯಕೆ ತಿಳಿಸಿದ್ದಾರೆ.

’ಹತ್ತು ವರ್ಷಗಳಲ್ಲಿ ಅತಿಯಾದ ಸ್ವಾತಂತ್ರ್ಯ ಮತ್ತು ಶಾಂತಿ ಅನುಭವಿಸಿರುವುದರಿಂದ ಜನರು 30 ವರ್ಷಗಳಿಂದ ಏನು ನಡೆದಿತ್ತು ಎಂಬುದನ್ನು ಮರೆತಿದ್ದಾರೆ. ಭದ್ರತೆಯನ್ನು ಕಡೆಗಣಿಸಿ ಜನರು ಶಾಂತಿಯನ್ನು ಆಸ್ವಾದಿಸಿದ್ದಾರೆ. ಇದರ ಪರಿಣಾಮ ಇಂತಹ ದಾಳಿ ನಡೆದಿದೆ’ ಎಂದೂ ಹೇಳಿದ್ದಾರೆ.

ಉಗ್ರನ ಹೆಜ್ಜೆ: ಕಟ್ಟೆಚ್ಚರ

ಬೆಂಗಳೂರು: ‘ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಉಗ್ರನೊಬ್ಬ ಬೆಂಗಳೂರು, ಕೇರಳ ಹಾಗೂ ಕಾಶ್ಮೀರದಲ್ಲೂ ಸಂಚರಿಸಿದ್ದ’ ಎಂದು ಆ ದೇಶದ ಸೇನಾ ಮುಖ್ಯಸ್ಥರು ಹೇಳಿಕೆ ನೀಡಿರುವ ಬೆನ್ನಲ್ಲೇ ರಾಜಧಾನಿ ಪೊಲೀಸರು ನಗರದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು, ಬಸ್ ಹಾಗೂ ಮೆಟ್ರೊ ನಿಲ್ದಾಣಗಳು, ಪ್ರಾರ್ಥನಾ ಮಂದಿರಗಳು, ಶಾಪಿಂಗ್ ಮಾಲ್‌ಗಳು ಹಾಗೂ ಹೋಟೆಲ್‌ಗಳ ಮೇಲೆ ‍ಪೊಲೀಸರು ನಿಗಾ ವಹಿಸಿದ್ದಾರೆ. ಅಲ್ಲದೇ, ಅಪರಿಚಿತರ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ.

ಈ ಸಂಬಂಧ ಸುದ್ಧಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್, ‘ಶಂಕಿತ ಉಗ್ರರು ನಗರದಲ್ಲಿ ಸಂಚರಿಸಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೂ, ನೆರೆರಾಷ್ಟ್ರದಲ್ಲಿ ವಿಧ್ವಂಸಕ ಕೃತ್ಯ ನಡೆದಿರುವುದರಿಂದ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ’ ಎಂದರು.

‘ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಕಂಡು ಬಂದರೆ ಸಾರ್ವಜನಿಕರು ತಕ್ಷಣ ನಿಯಂತ್ರಣ ಕೊಠಡಿಗೆ (100) ಕರೆ ಮಾಡಬೇಕು’ ಎಂದು ಮನವಿ ಮಾಡಿದರು.

ಶಂಕಿತ ಉಗ್ರರ ಮಾಹಿತಿ: ‘ಈ ಹಿಂದೆ ಬೆಂಗಳೂರಿನಲ್ಲಿ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ ಉಗ್ರರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವೀಸಾ ಅವಧಿ ಮುಗಿದರೂ ಅಕ್ರಮವಾಗಿ ‌ನೆಲೆಸಿರುವವರ ಹಾಗೂ ಹೊರಗಿನಿಂದ ಬಂದವರ ಮೇಲೂ ವಿಶೇಷ ನಿಗಾ ಇಡಲಾಗುತ್ತಿದೆ. ಹಗಲು ವೇಳೆಯಲ್ಲೂ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.