
ಮೆಲ್ಬೋರ್ನ್: ಸಿಡ್ನಿಯ ಬೋಂಡಿ ಬೀಚ್‌ನ ‘ಹನುಕ್ಕಾ ಯಹೂದಿ ಹಬ್ಬ’ದ ಪ್ರಾರಂಭೋತ್ಸವದಲ್ಲಿ ನಡೆದ ಗುಂಡಿನ ದಾಳಿಯು ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆಯಿಂದ ಪ್ರೇರಣೆ ಪಡೆದ ಉಗ್ರ ದಾಳಿ ಎಂದು ಆಸ್ಟ್ರೇಲಿಯಾ ಫೆಡರಲ್ ಪೊಲೀಸ್ ಕಮಿಷನರ್ ಕ್ರಿಸ್ಸಿ ಬ್ಯಾರೆಟ್ ತಿಳಿಸಿದ್ದಾರೆ.
50 ವರ್ಷದ ದಾಳಿಕೋರ ಸಾಜೀದ್ ಅಕ್ರಮ್ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. 24 ವರ್ಷದ ಅವರ ಮಗ ನವೀದ್ ಅಕ್ರಮ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
‘ಲಭ್ಯವಿರುವ ಸಾಕ್ಷ್ಯಗಳನ್ನು ಆಧರಿಸಿ ದಾಳಿಕೋರರು ಇಸ್ಲಾಮಿಕ್ ಸ್ಟೇಟ್‌ನಿಂದ ಪ್ರೇರೇಪಣೆ ಪಡೆದಿದ್ದರು ಎಂದು ಶಂಕಿಸಲಾಗಿದೆ. ವಶಕ್ಕೆ ಪಡೆದಿರುವ ವಾಹನದಲ್ಲಿ ಐಎಸ್ ಧ್ವಜ ಪತ್ತೆಯಾಗಿದೆ’ ಎಂದು ಪ್ರಧಾನಿ ಆಂಥೊನಿ ಅಲ್ಬನೀಸ್ ತಿಳಿಸಿದ್ದಾರೆ
ದಾಳಿಯಲ್ಲಿ ಗಾಯಗೊಂಡಿರುವ 25 ಜನರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ 10 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ದಾಳಿಯಲ್ಲಿ 10 ವರ್ಷ ಮಗು ಸೇರಿದಂತೆ 15 ಮಂದಿ ಮೃತಪಟ್ಟಿದ್ದಾರೆ.
ಗಾಯಾಳುಗಳಲ್ಲಿ ಮೂವರು ಭಾರತೀಯರು
ದಾಳಿಯಲ್ಲಿ ಗಾಯಗೊಂಡ 40 ಮಂದಿ ಪೈಕಿ ಮೂವರು ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎಂದು ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ. ಮೂವರಲ್ಲಿ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ‘ಆಸ್ಟ್ರೇಲಿಯಾ ಟುಡೇ’ ವರದಿ ಮಾಡಿದೆ. ಗಾಯಗೊಂಡ ಭಾರತೀಯ ವಿದ್ಯಾರ್ಥಿಗಳ ಹೆಸರನ್ನು ಅದು ಬಹಿರಂಗಪಡಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.