ADVERTISEMENT

ದೇಶ ತೊರೆದ ಅಧ್ಯಕ್ಷ ಅಸಾದ್: ಸಿರಿಯಾ ಜನರಿಂದ ಸಂಭ್ರಮಾಚರಣೆ

ಅಸಾದ್ ಕುಟುಂಬದ 50 ವರ್ಷಗಳ ಆಡಳಿತ ಅಂತ್ಯ

ಏಜೆನ್ಸೀಸ್
Published 8 ಡಿಸೆಂಬರ್ 2024, 16:26 IST
Last Updated 8 ಡಿಸೆಂಬರ್ 2024, 16:26 IST
ಬಶರ್ ಅಸಾದ್ ದೇಶ ತೊರೆದ ಸುದ್ದಿ ತಿಳಿದ ಹಿಂದೆಯೆ ಸಿರಿಯಾದ ಹೋಮ್ಸ್‌ ನಗರದಲ್ಲಿ ನಾಗರಿಕರು ರಸ್ತೆಗಿಳಿದು ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಬಶರ್ ಅಸಾದ್ ದೇಶ ತೊರೆದ ಸುದ್ದಿ ತಿಳಿದ ಹಿಂದೆಯೆ ಸಿರಿಯಾದ ಹೋಮ್ಸ್‌ ನಗರದಲ್ಲಿ ನಾಗರಿಕರು ರಸ್ತೆಗಿಳಿದು ಸಂಭ್ರಮಿಸಿದರು –ಎಎಫ್‌ಪಿ ಚಿತ್ರ   

ಡಮಾಸ್ಕಸ್‌: ‘ಡಮಾಸ್ಕಸ್‌ ದಿಗ್ವಿಜಯ’ ಹೆಸರಿನಲ್ಲಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ವಿರೋಧಿಗಳ ಗುಂಪು, ಹೇಳಿಕೆ ಓದುವ ಮೂಲಕ ಸರ್ಕಾರದ ಪತನವನ್ನು ಘೋಷಿಸಿದೆ. ‘ಎಲ್ಲ ನಾಗರಿಕರು, ಬಂಡಾಯ ಹೋರಾಟಗಾರರು ಸ್ವತಂತ್ರ ಸಿರಿಯಾ’ವನ್ನು ರಕ್ಷಿಸಿಕೊಳ್ಳಬೇಕು’ ಎಂದು ಕರೆ ನೀಡಿದರು. 

ಈಗ ಪದಚ್ಯುತಗೊಂಡಿರುವ ಬಶರ್ ಅಸಾದ್ 2000ರಲ್ಲಿ ಅಧಿಕಾರಕ್ಕೆ ಏರಿದ್ದರು. ಅವರ ತಂದೆ ಹಿರಿಯ ಮಗ ಬಸಿಲ್‌ನನ್ನು ಉತ್ತರಾಧಿಕಾರಿಯಾಗಿ ಬಿಂಬಿಸಿದ್ದರು. ಆದರೆ, ಬಸಿಲ್‌ ಕಾರು ಅಪಘಾತದಲ್ಲಿ ಮೃತಪಟ್ಟರು. ಆಗ ಲಂಡನ್‌ನಲ್ಲಿ ಓದುತ್ತಿದ್ದ ಬಶರ್‌ ಅವರನ್ನು ಕರೆತಂದು ಸೇನಾ ತರಬೇತಿ ನೀಡಲಾಗಿತ್ತು.

ತಂದೆ ಹಫೇಜ್ ಅಸಾದ್ 2000ರಲ್ಲಿ ಮೃತಪಟ್ಟಾಗ, ತರಾತುರಿಯಲ್ಲಿ 34 ವರ್ಷದ ಬಶರ್‌ರನ್ನು ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಅಧ್ಯಕ್ಷರಾಗಲು ಕನಿಷ್ಠ 40 ವರ್ಷ ಆಗಿರಬೇಕು ಎಂಬ ನಿಯಮವನ್ನು ಸಡಿಲಿಸಿ, ಮಿತಿಯನ್ನು 34 ವರ್ಷಕ್ಕೆ ನಿಗದಿಪಡಿಸಲಾಗಿತ್ತು. ನಂತರ ಬಶರ್ ಜನಾದೇಶವನ್ನೂ ಪಡೆದಿದ್ದರು. ಆದರೆ, ಆಗ ಚುನಾವಣೆಯಲ್ಲಿ ಕಣದಲ್ಲಿದ್ದುದು ಬಶರ್ ಮಾತ್ರ. ಅದಕ್ಕೂ ಹಿಂದೆ ಅವರ ತಂದೆ ಹಫೇಜ್‌ ಅಸಾದ್ ಸಿರಿಯಾದಲ್ಲಿ ನಿರಂತರ 30 ವರ್ಷ ಆಡಳಿತ ನಡೆಸಿದ್ದರು.

ADVERTISEMENT

‘ಅಧ್ಯಕ್ಷ ಅಸಾದ್ ದೇಶ ತೊರೆದಿದ್ದು, ತಲೆಮರೆಸಿಕೊಂಡಿದ್ದಾರೆ. ರಾಜಧಾನಿ ಡಮಾಸ್ಕಸ್‌ಗೆ ನಾವು ಲಗ್ಗೆ ಹಾಕಿದ ಹಿಂದೆಯೇ ಪಲಾಯನ ಮಾಡಿದರು’ ಎಂದು ಬಂಡುಕೋರರ ಗುಂಪು ಹೇಳಿದೆ.

ಅಸಾದ್ ಸರ್ಕಾರದ ವಿರುದ್ಧ ನಾಗರಿಕ ಸಂಘರ್ಷ ನಡೆದ ಅವಧಿಯಲ್ಲಿ ಪ್ರಾಂತೀಯ ಮತ್ತು ಅಂತರರಾಷ್ಟ್ರೀಯ ಶಕ್ತಿ ರಾಷ್ಟ್ರಗಳಿಗೆ ಯುದ್ಧ ಭೂಮಿಯಾಗಿಯೂ ಸಿರಿಯಾ ಪರಿವರ್ತನೆಗೊಂಡಿತ್ತು. ಸಂಘರ್ಷದ ಅವಧಿಯಲ್ಲಿ ಸಾವಿರಾರು ಜನ ಸತ್ತಿದ್ದರು. ಜನಸಂಖ್ಯೆಯ  ಅರ್ಧದಷ್ಟು ಮಂದಿ ಅತಂತ್ರರಾಗಿದ್ದರು.

ಸಂಭ್ರಮ: ಭಾನುವಾರ ಸೂರ್ಯೋದಯದವಾದದ್ದೇ ರಾಜಧಾನಿ ಡಮಾಸ್ಕಸ್‌ನಲ್ಲಿ ಜನರ ಸಂಭ್ರಮ ಗರಿಗೆದರಿತು. ಹಬ್ಬದ ವಾತಾವರಣ ಕಂಡುಬಂತು. ಜನರು ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಆಯಕಟ್ಟಿನ ಸ್ಥಳಗಳಲ್ಲಿ ಗುಂಪುಗೂಡಿ ‌ಸಂಭ್ರಮ ಆಚರಿಸಿದರು.

‘ದೇವರು ದೊಡ್ಡವನು’ ಎಂಬ ಮಾತು ಗುಂಪಿನಿಂದ ಅನುರಣಿಸುತ್ತಿತ್ತು. ವಾಹನಗಳ ಹಾರ್ನ್‌ ಮೊಳಗಿಸಿ ಸಂಭ್ರಮಿಸಿದರು. ಅಸಾದ್ ವಿರೋಧಿ ಘೋಷಣೆಗಳೂ ಕೇಳಿಬಂದವು. ಭದ್ರತಾ ಪಡೆಗಳವರು ಅಲ್ಲಲ್ಲಿ ಅನಾಥವಾಗಿ ಬಿಟ್ಟುಹೋಗಿದ್ದ ಶಸ್ತ್ರಾಸ್ತ್ರಗಳನ್ನೇ ಎತ್ತಿಕೊಂಡಿದ್ದ ತರುಣರು ದಿಗಂತದತ್ತ ಗುಂಡು ಹಾರಿಸಿ ವಿಜಯೋತ್ಸವ ಆಚರಿಸಿದರು.  

ರಕ್ಷಣಾ ಸಚಿವಾಲಯದ ಕೇಂದ್ರ ಸ್ಥಾನವೂ ಆಗಿದ್ದ ರಾಜಧಾನಿಯ ಉಮಯ್ಯದ್ ಸ್ಕ್ವೇರ್‌ನಲ್ಲಿ ಜನ ಗುಂಪುಗೂಡಿದ್ದರು. ಪುರುಷರು ಗಾಳಿಯಲ್ಲಿ ಗುಂಡು ಹಾರಿಸಿದರು. ಕೆಲವರು ತ್ರಿನಕ್ಷತ್ರಗಳಿದ್ದ ಧ್ವಜವನ್ನು ಗಾಳಿಯಲ್ಲಿ ಬೀಸಿದರು. ತುಸುವೇ ದೂರದಲ್ಲಿದ್ದ ಅಧ್ಯಕ್ಷರ ಅರಮನೆಗೂ ಲಗ್ಗೆಹಾಕಿದ ಜನರು, ಪದಚ್ಯುತ ಅಧ್ಯಕ್ಷರ ಭಾವಚಿತ್ರಗಳಿದ್ದ ಬೃಹತ್ ಪಟಗಳನ್ನು ಹರಿದು ಆಕ್ರೋಶ ಹೊರಹಾಕಿದರು.

ಸರ್ಕಾರದ ಪದಚ್ಯುತಿಯ ಹಿಂದೆಯೇ ಅನೇಕ ಯೋಧರು, ಪೊಲೀಸರು ಅಧಿಕಾರಿಗಳು ಹುದ್ದೆ ತೊರೆದು ಓಡಿಹೋಗಿದ್ದಾರೆ. ರಕ್ಷಣಾ ಸಚಿವಾಲಯವನ್ನು ಲೂಟಿ ಮಾಡುತ್ತಿರುವ ಹಾಗೂ ಸಚಿವಾಲಯ, ಅಧ್ಯಕ್ಷರ ಅರಮನೆಯಿಂದ ಕೆಲ ವಸ್ತುಗಳನ್ನು ಜನರು ಒಯ್ಯುತ್ತಿರುವ ವಿಡಿಯೊಗಳು ಹರಿದಾಡುತ್ತಿವೆ.

ಇತಿಹಾಸದುದ್ದಕ್ಕೂ ಸರ್ಕಾರದ ಪರವಿದ್ದ ಸ್ಥಳೀಯ ‘ಅಲ್‌ ವತನ್’ ದಿನಪತ್ರಿಕೆಯು, ‘ನಾವು ಸಿರಿಯಾದ ಹೊಸ ಪುಟ ನೋಡುತ್ತಿದ್ದೇವೆ. ಹೆಚ್ಚು ರಕ್ತಪಾತ ಆಗಲಿಲ್ಲ ಎಂಬುದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಸಿರಿಯಾ ಇನ್ನು ಎಲ್ಲ ಸಿರಿಯನ್ನರದು ಆಗಲಿದೆ ಎಂದು ಆಶಿಸುತ್ತೇವೆ’ ಎಂದೂ ಬರೆದಿದೆ.

‘ಈ ಹಿಂದೆ ಸರ್ಕಾರದ ಹೇಳಿಕೆಗಳನ್ನೇ ಪ್ರಕಟಿಸಿದ್ದಕ್ಕಾಗಿ ಮಾಧ್ಯಮ ಸಂಸ್ಥೆಗಳನ್ನು ನಿಂದಿಸಬಾರದು. ನಾವು ಸರ್ಕಾರದ ಸೂಚನೆಗಳನ್ನಷ್ಟೇ ಪಾಲಿಸಿದ್ದೆವು’ ಎಂದೂ ಪತ್ರಿಕೆ ಬರೆದುಕೊಂಡಿದೆ.

12 ವರ್ಷ ಗಡೀಪಾರಾಗಿದ್ದು ಭಾನುವಾರ ಸಿರಿಯಾಗೆ ಮರಳಿದ ಬಂಡುಕೋರ ಹೋರಾಟಗಾರರೊಬ್ಬರ ಸಂಭ್ರಮ –ಎಎಫ್‌ಪಿ ಚಿತ್ರ

ಸಿರಿಯಾದ ಖಾಮಿಶ್ಲಿ ನಗರದಲ್ಲಿ ಸಿರಿಯಾದ ಅಧ್ಯಕ್ಷ ಬಶರ್ ಅಸಾದ್ ಅವರ ತಂದೆ ಹಫೇಜ್ ಅಲ್‌ ಅಸಾದ್ ಅವರ ಪ್ರತಿಮೆಯನ್ನು ಬಂಡುಕೋರರು ನೆಲಸಮಗೊಳಿಸಿರುವುದು –ಎಎಫ್‌ಪಿ ಚಿತ್ರ
ಸಿರಿಯಾದ ಆಡಳಿತ ಪತನದ ಹಿನ್ನೆಲೆಯಲ್ಲಿ ಲೆಬನಾನ್‌ನ ಬಾರ್ ಎಲಿಯಾಸ್‌ ನಗರದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜನಸಮೂಹ –ಎಎಫ್‌ಪಿ ಚಿತ್ರ
ಸೇನೆಯ ನಡೆಯಿಂದ ನಮಗೆ ಜುಗುಪ್ಸೆ ಉಂಟಾಗಿತ್ತು. ಭಾರಿ ಅನ್ಯಾಯವಾಗಿತ್ತು. ಸಿರಿಯಾ ಈಗ ಸೇನೆಯಿಂದ ಮುಕ್ತವಾಗಿದೆ. ನಾವು ಹೆಮ್ಮೆ ಖುಷಿಯಿಂದ ದೇಶಕ್ಕೆ ಮರಳುತ್ತೇವೆ.
ಸಿರಿಯಾ ನಿರಾಶ್ರಿತರು ಬೈರೂತ್.
ಸಿರಿಯಾದ ಎಲ್ಲ ವರ್ಗಗಳ ಜನರಿಗೆ ನಮ್ಮ ಸಂದೇಶವೆಂದರೆ ಸಿರಿಯಾ ಎಲ್ಲರಿಗೂ ಸೇರಿದ್ದಾಗಿದೆ. ಅಸಾದ್ ಕುಟುಂಬವು ಏನು ಮಾಡಿತೊ ಅದನ್ನು ನಾವು ಮಾಡುವುದಿಲ್ಲ
ಅನಾಸ್‌ ಸಲ್ಖಾಡಿ ಬಂಡುಕೋರ ಗುಂಪಿನ ಕಮಾಂಡರ್
ಪಲಾಯನಗೊಂಡಿರುವ ಸಿರಿಯಾ ಅಧ್ಯಕ್ಷರಿಗೆ ಆಶ್ರಯ ನೀಡುವ ಆಸಕ್ತಿ ರಷ್ಯಾಗೆ ಇದ್ದಂತಿಲ್ಲ. ಉಕ್ರೇನ್‌ ಯುದ್ಧದಲ್ಲಿ 6 ಲಕ್ಷ ಯೋಧರು ಗಾಯಾಳು ಅಥವಾ ಸತ್ತಿರುವ ಕಾರಣ ರಷ್ಯಾ ಅಧ್ಯಕ್ಷ ಪುಟಿನ್‌ ಅವರು ಸಿರಿಯಾ ಮೇಲೆ ಆಸಕ್ತಿ ಕಳೆದುಕೊಂಡಿದ್ದಾರೆ.
ಡೊನಾಲ್ಡ್ ಟ್ರಂಪ್‌ ಅಮೆರಿಕದ ನಿಯೋಜಿತ ಅಧ್ಯಕ್ಷ
ಮೂಲಭೂತವಾದಿಗಳ ಹಿಡಿತಕ್ಕೆ ಸಿರಿಯಾ ಸಿಲುಕದಿರಲಿ. ಅಧ್ಯಕ್ಷ ಅಸಾದ್‌ ತನ್ನದೇ ಜನರ ಕೊಂದಿದ್ದಾನೆ. ಅವರ ವಿಷಯುಕ್ತ ಅನಿಲ ಪ್ರಯೋಗಿಸಿದ್ದಾರೆ. ಕಿರುಕುಳ ಎಸಗಿದ್ದಾರೆ. ಇದಕ್ಕಾಗಿ ಅವರನ್ನು ಹೊಣೆ ಮಾಡಬೇಕು.
ಅನ್ನಾಲೆನಾ ಬೆರ್ಬೊಕ್ ವಿದೇಶಾಂಗ ಸಚಿವೆ ಜರ್ಮನಿ 

ಇನ್ನು ಇದು ಬಂಡುಕೋರರ ಸರ್ಕಾರ –ಪ್ರಧಾನಿ

‘ವಿರೋಧಿ ಬಂಡುಕೋರರ ಗುಂಪಿಗೆ ‘ಪೂರ್ಣ ಸಹಕಾರ’ ನೀಡುತ್ತೇವೆ. ನನ್ನ ಸರ್ಕಾರ ಇನ್ನು ಬಂಡುಕೋರರ ಸರ್ಕಾರವಾಗಿ ಬದಲಾಗಲಿದೆ’ ಎಂದು ಸಿರಿಯಾ ಪ್ರಧಾನಿ ಮೊಹಮ್ಮದ್ ಘಾಜಿ ಜಲಾಲಿ ಅವರು ವಿಡಿಯೊ ಹೇಳಿಕೆ ನೀಡಿದ್ದಾರೆ. ಸ್ಥಳೀಯ ವಾಹಿನಿ ‘ಅಲ್‌ ಅರೇಬಿಯಾ’ ಜೊತೆಗೂ ಮಾತನಾಡಿದ ಅವರು ‘ಅಧ್ಯಕ್ಷ ಅಸಾದ್ ಮತ್ತು ರಕ್ಷಣಾ ಸಚಿವ ಎಲ್ಲಿದ್ದಾರೆಂದು ತಿಳಿದಿಲ್ಲ. ಶನಿವಾರವೇ ಅವರ ಜೊತೆಗೆ ಸಂಪರ್ಕ ತಪ್ಪಿತ್ತು’ ಎಂದರು. ಅಧ್ಯಕ್ಷ ಬಶರ್‌ ಅಸಾದ್‌ ಅವರ ವಿರುದ್ಧ ಯುದ್ಧ ಅಪರಾಧಗಳು ಮತ್ತು ಯುದ್ಧದ ಅವಧಿಯಲ್ಲಿ ಮನುಕುಲದ ಮೇಲೇ ಅಪರಾಧ ಎಸಗಿರುವ ಗಂಭೀರ ಆರೋಪಗಳಿವೆ. 2013ರಲ್ಲಿ ರಾಜಧಾನಿಯ ಹೊರವಲಯದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಸಿದ್ದ ಆರೋಪವು ಅವರ ಮೇಲಿದೆ. ಅಸಾದ್‌ಗೆ ಬೆಂಬಲವಾಗಿದ್ದ ಇರಾನ್‌ ಸಿರಿಯಾ ಬೆಳವಣಿಗೆ ಕುರಿತು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಡಮಾಸ್ಕಸ್‌ನ ಇರಾನ್‌ ರಾಯಭಾರ ಕಚೇರಿಯಲ್ಲಿ ದಾಂದಲೆ ನಡೆದಿದೆ.

ಯಾರಿದು ಗೊಲಾನಿ

ಬಂಡುಕೋರ ಗುಂಪಿನ ನಾಯಕ?  ಬೈರೂತ್‌ (ಎ.ಪಿ): ಅಬು ಮೊಹಮ್ಮದ್‌ ಅಲ್ ಗೊಲಾನಿ –ಇವರು ಸಿರಿಯಾದ ಬಶರ್ ಅಸಾದ್ ನೇತೃತ್ವದ ಆಡಳಿತಕ್ಕೆ ಕೊನೆಯಾಡಿಗ ಬಂಡುಕೋರರ ಗುಂಪಿನ ನಾಯಕ. ಸಾರ್ವಜನಿಕವಾಗಿ ವರ್ಚಸ್ಸು ರೂಪಿಸಿಕೊಳ್ಳಲು ಹಲವು ವರ್ಷಗಳಿಂದ ಶ್ರಮಿಸಿದ್ದ ಗೊಲಾನಿ ಅಲ್‌ ಖೈದಾ ಜೊತೆಗೆ ದೀರ್ಘಕಾಲದಿಂದ ಸಂಪರ್ಕದಲ್ಲಿದ್ದವರು. ಸ್ವತಃ ತನ್ನನ್ನು ಬಹುತ್ವದ ನಾಯಕ ಮತ್ತು ತಾಳ್ಮೆಯ ಪ್ರತೀಕ ಎಂದು ಬಣ್ಣಿಸಿಕೊಂಡಿದ್ದವರು. ಇತ್ತೀಚಿನ ದಿನಗಳಲ್ಲಿ ತನ್ನ ನಿಜವಾದ ‘ಅಹ್ಮದ್‌ ಅಲ್ ಶಾರಾ’ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಿದ್ದರು.  42 ವರ್ಷ ವಯಸ್ಸಿನ ಗೊಲಾನಿ ‘ಜಿಹಾದಿ ಮೂಲಭೂತ’ವಾದಿ ಸ್ಥಾನದಿಂದ ದೇಶದ ಆಡಳಿತ ಹಿಡಿತಕ್ಕೆ ಪಡೆಯುವ ಹಂತ ತಲುಪಿದಿದ್ದಾರೆ. ಅಮೆರಿಕ ಈತನನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಭಾನುವಾರ ಬಶರ್ ಅಸಾದ್ ಸರ್ಕಾರ ಪತನಗೊಳ್ಳುವವರೆಗೆ ಈತ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈತ ಎಚ್‌ಟಿಎಸ್‌ ಎಂದು ಗುರುತಿಸುವ ಹಯಾತ್ ತಾಹಿರ್‌ ಅಲ್ ಶಾಮ್‌ ಬಂಡುಕೋರ ಪಡೆಯ ನಾಯಕ. 2003ರಿಂದಲೂ ಅಲ್‌ಖೈದಾ ನಿಕಟವರ್ತಿ. ಎಚ್‌ಟಿಎಸ್ ಗುಂಪಿನವರು ಬಹುತೇಕ ಜಿಹಾದಿಗಳು. ಸಿಎನ್‌ಎನ್‌ ಸುದ್ದಿವಾಹಿನಿಗೆ ಕಳೆದ ವಾರವಷ್ಟೇ ನೀಡಿದ್ದ ಸಂದರ್ಶನದಲ್ಲಿ ಗೊಲಾನಿ ‘ಮಾತುಗಳಿಂದ ಅಲ್ಲ ಕೃತಿಗಳಿಂದ ನಮ್ಮನ್ನು ಅಳೆಯಿರಿ’ ಎಂದು ಹೇಳಿಕೊಂಡಿದ್ದ. 

ಸಿರಿಯಾಗೆ ಮರಳಲು ನಿವಾಸಿಗಳ ಧಾವಂತ

ಡಮಾಸ್ಕಸ್‌ (ಎ.ಪಿ): ಆಡಳಿತ ವಿರೋಧಿಗಳ ಗುಂಪಿನ ಪ್ರಾಬಲ್ಯದ ಹಿಂದೆಯೇ ಸೇನೆ ಪ್ರಧಾನಿ ಮೊಹಮ್ಮದ್ ಘಾಜಿ ಜಲಾಲಿ ಅವರನ್ನು ಬಿಗಿ ರಕ್ಷಣೆಯಲ್ಲಿ ಹೋಟೆಲ್‌ವೊಂದಕ್ಕೆ ಕರೆದೊಯ್ದಿದೆ. ಈ ಕುರಿತ ವಿಡಿಯೊವನ್ನು ಮಾಧ್ಯಮಗಳು ಪ್ರಸಾರ ಮಾಡಿವೆ.  ಇನ್ನೊಂದೆಡೆ ಸಂಘರ್ಷ ಆರಂಭವಾದ ಬಳಿಕ ದೇಶವನ್ನು ತೊರೆದಿದ್ದ ಅಸಂಖ್ಯಾತ ಸಿರಿಯನ್ನರು ಬಶರ್ ಆಡಳಿತ ಪತನದ ಹಿಂದೆಯೇ ದೇಶಕ್ಕೆ ಮರಳಲು ಮುಂದಾಗಿದ್ದಾರೆ. ಇದರಿಂದಾಗಿ ಲೆಬನಾನ್‌ಗೆ ಹೊಂದಿಕೊಂಡ ಗಡಿಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಲೆಬನಾನ್‌ ಗಡಿಭದ್ರತಾ ಪಡೆ ಭಾನುವಾರ ಬೆಳಿಗ್ಗೆಯೇ ಗಡಿಯನ್ನು ಮುಕ್ತಗೊಳಿಸಿದ್ದು  ಮುಕ್ತವಾಗಿ ಸಿರಿಯಾಗೆ ಮರಳಲು ಅವಕಾಶ ಕಲ್ಪಿಸಿಕಕೊಟ್ಟಿದೆ. ‘ಲೆಬನಾನ್‌ ವಲಸಿಗರಿಂದ ತುಂಬಿದೆ’ ಎಂಬುದು ಅಲ್ಲಿನ ಅಧಿಕಾರಿಗಳ ಸಾಮಾನ್ಯ ದೂರಾಗಿತ್ತು. ಅಧಿಕೃತ ಅಂಕಿ ಅಂಶದ ಪ್ರಕಾರ 7.68 ಲಕ್ಷ ಸಿರಿಯಾ ವಲಸಿಗರಿದ್ದರು. ನೋಂದಣಿ ಆಗದವರ ಸಂಖ್ಯೆ ಹೆಚ್ಚಿದೆ. ಹೆಚ್ಚಿನ ಸಿರಿಯನ್ನರು ಲೆಬನಾನ್‌ಗೆ ವಲಸೆ ಹೋಗಿದ್ದರು.

ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ವಿರೋಧಿಗಳು 2018ರಿಂದ ರಾಜಧಾನಿ ಪ್ರವೇಶಿಸಲು ಆಗಿರಲಿಲ್ಲ. ಸೇನೆ ರಾಜಧಾನಿ ಹೊರವಲಯದಲ್ಲಿ ದಿಗ್ಬಂಧನ ಹೇರಿತ್ತು.  ವಿರೋಧಿಗಳು ಕೆಲ ದಿನದ ಹಿಂದೆ ಸಿರಿಯಾದ 3ನೇ ಅತಿದೊಡ್ಡ ನಗರ ಹೊಮ್ಸ್‌ ಅನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ಈ ನಗರ ರಾಜಧಾನಿ ಡಮಾಸ್ಕಸ್‌ ಮತ್ತು ಕರಾವಳಿ ಪ್ರಾಂತ್ಯದ ಲಟಾಕಿಯ ನಡುವೆ ಸಂಪರ್ಕಸೇತುವಾಗಿದೆ. ಇಲ್ಲಿಯೇ ಸಿರಿಯಾ ನಾಯಕರ ನೆಲೆರಷ್ಯಾದ ನೌಕಾಪಡೆ ನೆಲೆ ಇದೆ. ಅಲ್ಲದೆ ವಿರೋಧಿಗಳ ಗುಂಪು ಈ ಹಿಂದೆಯೇ ಅಲೆಪ್ಪೊ ಮತ್ತು ಹಮಾ ನಗರವನ್ನೂ ಹಿಡಿತಕ್ಕೆ ಪಡೆದಿದ್ದರು. ನ.27 ಬಳಿಕ ರಾಜಧಾನಿ ಡಮಾಸ್ಕಸ್ ಸುಪರ್ದಿಗೆ ಪಡೆಯುವ ಯತ್ನ ಚುರುಕಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.