– ಪ್ರಜಾವಾಣಿ ಚಿತ್ರ
ಕುವೈತ್: ಕಲುಷಿತ ಮದ್ಯದಿಂದ ವಿಷವಾದ ಮೆಥನಾಲ್ ಸೇವಿಸಿದ 63 ಜನರಲ್ಲಿ 13 ಮಂದಿ ಮೃತಪಟ್ಟು, 21 ಜನ ಶಾಶತ್ವವಾಗಿ ಕುರುಡರಾಗಿದ್ದಾರೆ ಎಂದು ಕುವೈತ್‌ನ ಆರೋಗ್ಯ ಸಚಿವಾಲಯವು ಹೇಳಿದೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಸಚಿವಾಲಯವು, ‘ಇವರೆಲ್ಲರೂ ಏಷ್ಯಾ ಖಂಡಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ 50 ಜನರಿಗೆ ತಕ್ಷಣ ಡಯಾಲಿಸಿಸ್‌ನ ಅಗತ್ಯವಿದೆ. ಬದುಕುಳಿದಿರುವ 31 ಜನರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿದೆ’ ಎಂದಿದೆ.
ಮದ್ಯ ತಯಾರಿಕೆ ಅಥವಾ ಆಮದು ಮಾಡಿಕೊಳ್ಳುವುದಕ್ಕೆ ಕುವೈತ್‌ನಲ್ಲಿ ನಿಷೇಧ ಹೇರಲಾಗಿದೆ. ಹೀಗಿದ್ದರೂ, ಕೆಲವರು ಅಕ್ರಮವಾಗಿ ಮದ್ಯ ತಯಾರಿಸುತ್ತಾರೆ. ಯಾವುದೇ ಗುಣಮಟ್ಟ ಕಾಯ್ದುಕೊಳ್ಳದ ಇಂಥ ಮದ್ಯವನ್ನು ಗ್ರಾಹಕರು ಸೇವಿಸಿದ್ದರಿಂದ ಅನಾಹುತ ಸಂಭವಿಸಿದೆ ಎಂದಿದ್ದಾರೆ.
‘ಕಳೆದ ಐದು ದಿನಗಳಲ್ಲಿ ಇಂಥ ಕಳಪೆ ಗುಣಮಟ್ಟದ ಮದ್ಯ ಸೇವಿಸಿ 40 ಭಾರತೀಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ. ಕೆಲವರು ಮೃತಪಟ್ಟಿದ್ದಾರೆ’ ಎಂದು ಭಾರತದ ರಾಯಭಾರ ಕಚೇರಿಗೆ ಕುವೈತ್ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.