ADVERTISEMENT

ಚೀನಾ ಒತ್ತಡಕ್ಕೆ ಮಣಿಯುವುದಿಲ್ಲ: ತೈವಾನ್‌ ಅಧ್ಯಕ್ಷೆ ತಿರುಗೇಟು

ಏಜೆನ್ಸೀಸ್
Published 10 ಅಕ್ಟೋಬರ್ 2021, 16:14 IST
Last Updated 10 ಅಕ್ಟೋಬರ್ 2021, 16:14 IST
ಸೈ ಇಂಗ್ ವೆನ್‌
ಸೈ ಇಂಗ್ ವೆನ್‌   

ತೈಪೆ: ‘ಚೀನಾದ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ದ್ವೀಪರಾಷ್ಟ್ರದ ತೈವಾನ್‌ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲಾಗುವುದು’ ಎಂದು ತೈವಾನ್‌ ಭಾನುವಾರ ಹೇಳಿದೆ.

‘ತೈವಾನ್‌ ದೇಶದ ಭಾಗವಾಗಿದ್ದು, ಬಲಪ್ರಯೋಗ ಮಾಡಿಯಾದರೂ ಅದನ್ನು ವಶಕ್ಕೆ ಪಡೆಯುತ್ತೇವೆ’ ಎಂಬ ಚೀನಾದ ಪ್ರತಿಪಾದನೆಗೆ ಈ ಮೂಲಕ ಭಾನುವಾರ ತಿರುಗೇಟು ನೀಡಿದೆ.

‘ತೈವಾನ್‌ನ ರಾಷ್ಟ್ರೀಯ ದಿನ’ ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷೆ ಸೈ ಇಂಗ್ ವೆನ್‌, ‘ನಾವು ಸಾಧನೆ ಮಾಡಿದಷ್ಟೂ ಚೀನಾದ ಒತ್ತಡ ಹೆಚ್ಚಲಿದೆ.ಚೀನಾದ ಮಾರ್ಗದಲ್ಲಿಯೇ ಸಾಗಬೇಕು ಎಂದು ನಮ್ಮ ಮೇಲೆ ಒತ್ತಡ ಹೇರಲಾಗದು’ ಎಂದೂ ಪ್ರತಿಪಾದಿಸಿದರು.

ADVERTISEMENT

ಚೀನಾದ ಯುದ್ಧ ವಿಮಾನಗಳು ದ್ವೀಪರಾಷ್ಟ್ರದ ವಾಯುಗಡಿ ಪ್ರವೇಶಿಸಿವೆ ಎಂಬ ವರದಿಗಳ ಹಿಂದೆಯೇ ಈ ಮಾತು ಹೇಳಿದರು. ತೈವಾನ್‌ ರಕ್ಷಣಾ ಸಚಿವಾಲಯದ ಪ್ರಕಾರ, ಎರಡು ಯುದ್ಧ ವಿಮಾನ ಸೇರಿದಂತೆ ಮೂರು ವಿಮಾನಗಳು ತೈವಾನ್‌ ವಾಯುಗಡಿಯನ್ನು ಪ್ರವೇಶಿಸಿವೆ.

‘ಚೀನಾ ಜೊತೆಗಿನ ಗೊಂದಲವು ಬಗೆಹರಿಯುವ ವಿಶ್ವಾಸವಿದೆ. ಆದರೆ, ತೈವಾನ್‌ ನಾಗರಿಕರು ಒತ್ತಡಕ್ಕೆ ಮಣಿಯುತ್ತಾರೆ ಎಂಬ ಭ್ರಮೆ ಬೇಡ. ತೈವಾನ್‌ ರಕ್ಷಣೆಗೆ ಮೊದಲ ಆದ್ಯತೆ ನೀಡಲಿದೆ’ ಎಂದು ಹೇಳಿದರು.

ಸ್ವತಂತ್ರ ಆಡಳಿತವುಳ್ಳ ತೈವಾನ್‌ ಸುಮಾರು 2.3 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ನಿರಂತರವಾಗಿ ಚೀನಾದಿಂದ ಅತಿಕ್ರಮಣ ಭೀತಿ ಎದುರಿಸುತ್ತಿದೆ. 1949ರ ಯುದ್ಧದ ಬಳಿಕ ಉಭಯ ದೇಶಗಳು ಪ್ರತ್ಯೇಕವಾಗಿವೆ.

2022ರಲ್ಲಿ ಮೂರನೇ ಅವಧಿಗೆ ಅಧಿಕಾರ ವಿಸ್ತರಿಸಿಕೊಳ್ಳುವ ಸಿದ್ಧತೆಯಲ್ಲಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು, ‘ತೈವಾನ್‌ ಸ್ವಾಧೀನ ಪಡೆಯುವುದು ತಮ್ಮ ನಾಯಕತ್ವದ ಮುಖ್ಯ ಗುರಿ‘ ಎಂದು ಈಗಾಗಲೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.