ADVERTISEMENT

ವಿಮಾನ ಸಂಚಾರ ಮರು ಆರಂಭಕ್ಕೆ ಕೋರಿ ಭಾರತಕ್ಕೆ ಪತ್ರ ಬರೆದ ತಾಲಿಬಾನ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 16:28 IST
Last Updated 29 ಸೆಪ್ಟೆಂಬರ್ 2021, 16:28 IST
ರಾಯಿಟರ್ಸ್: ಪ್ರಾತಿನಿಧಿಕ ಚಿತ್ರ
ರಾಯಿಟರ್ಸ್: ಪ್ರಾತಿನಿಧಿಕ ಚಿತ್ರ   

ನವದೆಹಲಿ: ತಾಲಿಬಾನ್ ಆಡಳಿತವಿರುವಅಫ್ಗಾನಿಸ್ತಾನದ ನಾಗರಿಕ ವಿಮಾನಯಾನ ಸಂಸ್ಥೆ ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಗಾನಿಸ್ತಾನವು ಭಾರತದಿಂದ ಮತ್ತೆ ವಾಣಿಜ್ಯ ವಿಮಾನ ಸಂಚಾರ ಆರಂಭಿಸುವಂತೆ ಕೋರಿ ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ಕ್ಕೆ ಪತ್ರ ಬರೆದಿದೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

ನಾಗರಿಕ ವಿಮಾನಯಾನ ಸಚಿವಾಲಯವು ಪತ್ರವನ್ನು ಪರಿಶೀಲಿಸುತ್ತಿದೆ.

ಆಗಸ್ಟ್ 15 ರಂದು ತಾಲಿಬಾನ್ ಉಗ್ರರು ಕಾಬೂಲ್‌ ಅನ್ನು ವಶಕ್ಕೆ ಪಡೆಯುವ ಮೂಲಕ ಇಡೀ ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ಬಳಿಕ ಎಲ್ಲಾ ವಾಣಿಜ್ಯ ವಿಮಾನಗಳ ಕಾರ್ಯಾಚರಣೆಗಳನ್ನು ಭಾರತ ನಿಲ್ಲಿಸಿತ್ತು. ಆಗಸ್ಟ್ 31ರವರೆಗೆ ಅಲ್ಲಿ ಸಿಲುಕಿದ್ದ ನಾಗರಿಕರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಮಾತ್ರ ನಡೆಸಲಾಗಿತ್ತು.

ADVERTISEMENT

ಇತ್ತೀಚೆಗೆ ಪಾಕಿಸ್ತಾನವು ಅಫ್ಗಾನಿಸ್ತಾನಕ್ಕೆ ವಿಮಾನಯಾನ ಮರುಆರಂಭಿಸಿದೆ. ಇದರ ಬೆನ್ನಲ್ಲೇ, ತಾಲಿಬಾನ್ ಸರ್ಕಾರ ಭಾರತವನ್ನು ಸಂಪರ್ಕಿಸಿದೆ.

ಪತ್ರದಲ್ಲೇನಿದೆ: ಅಫ್ಗಾನಿಸ್ತಾನದ ನಾಗರಿಕ ವಿಮಾನಯಾನ ಮತ್ತು ಸಾರಿಗೆ ಸಚಿವ ಅಲ್ಹಾಜ್ ಹಮೀದುಲ್ಲಾ ಅಖುಂಡಜಾದ ಅವರು ಪತ್ರ ಬರೆದಿದ್ದು, ‘ಭಾರತ ಮತ್ತು ನಮ್ಮ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ನಡುವೆ ಸುಗಮವಾದ ವೈಮಾನಿಕ ಸಂಚಾರವನ್ನು ಆರಂಭಿಸಬೇಕೆಂಬುದು ಈ ಪತ್ರದ ಉದ್ದೇಶವಾಗಿದೆ. ನಿಮ್ಮ ಕಡೆಯಿಂದ ವಾಣಿಜ್ಯ ವಿಮಾನಯಾನಕ್ಕೆ ಅನುವು ಮಾಡಿಕೊಡಬೇಕೆಂದು ಅಫ್ಗಾನಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರವು ವಿನಂತಿಸುತ್ತದೆ’ ಎಂದು ಮನವಿ ಮಾಡಲಾಗಿದೆ.

‘ಭದ್ರತೆ ಕುರಿತಂತೆ ಅಫ್ಗಾನಿಸ್ತಾನದ ನಾಗರಿಕ ವಿಮಾನಯಾನ ಸಂಸ್ಥೆ ಇಸ್ಲಾಮಿಕ್ ಎಮಿರೇಟ್‌ ಅತ್ಯುನ್ನತ ಭರವಸೆಯನ್ನು ನೀಡುತ್ತದೆ’ಎಂದು ಅವರು ಹೇಳಿದ್ದಾರೆ.

‘ಇತ್ತೀಚೆಗೆ ಅಮೆರಿಕ ಯೋಧರು ತೆರಳುವುದಕ್ಕೂ ಮುನ್ನ ಕಾಬೂಲ್ ವಿಮಾನ ನಿಲ್ದಾಣವು ಬಾಂಬ್ ಸ್ಫೋಟಿಸಿ ಹಾನಿಗೊಳಗಾಗಿ ನಿಷ್ಕ್ರಿಯವಾಗಿದ್ದ ಸಂಗತಿ ನಿಮಗೆ ತಿಳಿದಿದೆ. ಬಳಿಕ, ಕತಾರ್ ದೇಶದ ತಾಂತ್ರಿಕ ನೆರವಿನಿಂದ, ವಿಮಾನ ನಿಲ್ದಾಣವು ಮತ್ತೆ ಕಾರ್ಯಾರಂಭ ಮಾಡಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅಮೆರಿಕಕ್ಕೆ ತಾಲಿಬಾನ್‌ ಎಚ್ಚರಿಕೆ

ಅಫ್ಗಾನಿಸ್ತಾನದ ವಿಮಾನಯಾನ ಪ್ರದೇಶದ ಮೇಲೆ ಅಮೆರಿಕ ಡ್ರೋನ್‌ ಹಾರಿಸುತ್ತಿರುವುದರ ವಿರುದ್ಧ ತಾಲಿಬಾನ್‌ಬುಧವಾರ ಎಚ್ಚರಿಕೆ ನೀಡಿದೆ.

ಅಫ್ಗಾನಿಸ್ತಾನದ ಮೇಲೆ ಡ್ರೋನ್‌ ಹಾರಿಸುವ ಮೂಲಕ ಎಲ್ಲಾ ಅಂತರರಾಷ್ಟ್ರೀಯ ಹಕ್ಕುಗಳು ಮತ್ತು ಕಾನೂನುಗಳನ್ನು ಅಮೆರಿಕ ಉಲ್ಲಂಘಿಸಿದೆ. ಜೊತೆಗೆ, ದೋಹಾ ಮತ್ತು ಕತಾರ್‌ನಲ್ಲಿ ತಾಲಿಬಾನ್‌ ಜೊತೆಗೆ ಮಾಡಿಕೊಂಡ ಒಪ್ಪಂದವನ್ನೂ ಅಮೆರಿಕ ಮುರಿದಿದೆ ಎಂದು ತಾಲಿಬಾನ್‌ ಆರೋಪಿಸಿದೆ.

ಋಣಾತ್ಮಕ ಪರಿಣಾಮಗಳನ್ನು ತಡೆಯುವ ದಿಸೆಯಲ್ಲಿ, ಅಂತರರಾಷ್ಟ್ರೀಯ ಹಕ್ಕುಗಳು, ಕಾನೂನುಗಳು ಮತ್ತು ಒಪ್ಪಂದಗಳಿಗೆ ಅನುಗುಣವಾಗಿ ಅಫ್ಗಾನಿಸ್ತಾನದ ಜೊತೆಎಲ್ಲಾ ದೇಶಗಳು ವರ್ತಿಸಬೇಕು. ಇದನ್ನು ನಾವು ವಿಶೇಷವಾಗಿ ಅಮೆರಿಕಕ್ಕೆ ಹೇಳುತ್ತೇವೆ ಎಂದು ತಾಲಿಬಾನ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.