ADVERTISEMENT

ಅಫ್ಗಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಸಹ-ಶಿಕ್ಷಣ ನಿಷೇಧಿಸಿದ ತಾಲಿಬಾನ್: ವರದಿ

ಪಿಟಿಐ
Published 21 ಆಗಸ್ಟ್ 2021, 11:59 IST
Last Updated 21 ಆಗಸ್ಟ್ 2021, 11:59 IST
ಐಸ್ಟಾಕ್ ಪ್ರಾತಿನಿಧಿಕ ಚಿತ್ರ
ಐಸ್ಟಾಕ್ ಪ್ರಾತಿನಿಧಿಕ ಚಿತ್ರ   

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳನ್ನು ಗೌರವಿಸುವುದಾಗಿ ಭರವಸೆ ನೀಡಿದ್ದ ತಾಲಿಬಾನಿಗಳು, ಇದೀಗ ತಮ್ಮ ಮಾತನ್ನು ಮೀರಿ ಹೆರಾತ್ ಪ್ರಾಂತ್ಯದ ಸರ್ಕಾರಿ ಮತ್ತು ಖಾಸಗಿ ಶಿಕ್ಷ ಸಂಸ್ಥೆಗಳಲ್ಲಿ ಸಹ-ಶಿಕ್ಷಣ(ಗಂಡು ಮತ್ತು ಹೆಣ್ಣು ಮಕ್ಕಳು ಒಟ್ಟಿಗೆ ಕಲಿಯುವ ಶಿಕ್ಷಣ ವ್ಯವಸ್ಥೆ)ವನ್ನು ನಿಷೇಧಿಸಿದ್ದಾರೆ. ಸಹ–ಶಿಕ್ಷಣವನ್ನು ‘ಸಮಾಜದ ಎಲ್ಲ ಅನಿಷ್ಟಗಳ ಮೂಲ' ಎಂದು ಅವರು ಜರಿದಿದ್ದಾರೆ.

ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಖಾಸಗಿ ಸಂಸ್ಥೆಗಳ ಮಾಲೀಕರು ಮತ್ತು ತಾಲಿಬಾನ್ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಖಾಮಾ ಪ್ರೆಸ್ ನ್ಯೂಸ್ ಏಜೆನ್ಸಿ ಶನಿವಾರ ವರದಿ ಮಾಡಿದೆ.

ಕಳೆದ ವಾರ ಅಫ್ಗಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಹೊರಡಿಸಿದ ಮೊದಲ 'ಫತ್ವಾ' ಇದಾಗಿದೆ.

ADVERTISEMENT

ಮಂಗಳವಾರ, ಮಾಧ್ಯಮಗಳನ್ನು ಉದ್ದೇಶಿಸಿ ಮತನಾಡಿದ್ದ ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್, ತಾಲಿಬಾನ್ ಇಸ್ಲಾಮಿಕ್ ಕಾನೂನಿನ ನಿಯಮಗಳ ಅಡಿಯಲ್ಲಿ ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ಭರವಸೆ ನೀಡಿದ್ದನು. ಈ ಹಿಂದಿನ ಕಾನೂನುಗಳಲ್ಲಿ ಬದಲಾವಣೆಗಳನ್ನು ಮಾಡುವುದಾಗಿ ಹೇಳಿದ್ದನು. ಆದರೆ, ಈಗ ಅದೇ ಚಾಳಿಯನ್ನು ತಾಲಿಬಾನಿಗಳು ಮುಂದುವರಿಸಿದ್ದಾರೆ.

ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು, ತಾಲಿಬಾನ್ ಪ್ರತಿನಿಧಿ ನಡುವೆ ನಡೆದ ಮೂರು ಗಂಟೆಗಳ ಸಭೆ ಬಳಿಕ, ಸಹ-ಶಿಕ್ಷಣವನ್ನು ಕೊನೆಗೊಳಿಸಬೇಕು. ಬೇರೆ ಪರ್ಯಾಯ ಮಾರ್ಗವಿಲ್ಲ ಎಂದು ಅಫ್ಗಾನಿಸ್ತಾನದ ಉನ್ನತ ಶಿಕ್ಷಣದ ಮುಖ್ಯಸ್ಥ ಮುಲ್ಲಾ ಫರೀದ್ ಹೇಳಿದ್ದಾರೆ.

ಮಹಿಳಾ ಉಪನ್ಯಾಸಕಿಯರಿಗೆ ಕೇವಲ ವಿದ್ಯಾರ್ಥಿನಿಯರಿಗೆ ಕಲಿಸಲು ಮಾತ್ರ ಅವಕಾಶವಿದೆ. ಆದರೆ, ಪುರುಷರಿಗೆ ಕಲಿಸಲು ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದರು.

ಸಹ-ಶಿಕ್ಷಣ 'ಸಮಾಜದಲ್ಲಿನ ಎಲ್ಲಾ ಅನಿಷ್ಟಗಳ ಮೂಲ' ಎಂದು ಫರೀದ್ ಜರಿದಿದ್ದಾರೆ ಎಂದು ವರದಿ ಹೇಳಿದೆ.

ಕಳೆದ ಎರಡು ದಶಕಗಳಲ್ಲಿ, ಅಫ್ಗಾನಿಸ್ತಾನದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಹ-ಶಿಕ್ಷಣ ಮತ್ತು ಲಿಂಗ ಆಧಾರಿತ ಪ್ರತ್ಯೇಕ ತರಗತಿಗಳ ಮಿಶ್ರ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.

ಅಧಿಕೃತ ಅಂದಾಜಿನ ಪ್ರಕಾರ, ಹೆರಾತ್‌ನ ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ 40,000 ವಿದ್ಯಾರ್ಥಿಗಳು ಮತ್ತು 2,000 ಉಪನ್ಯಾಸಕರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.