ADVERTISEMENT

ಕಣ್ಣಿಗೆ ಕಣ್ಣು:80,000 ಜನರ ಮುಂದೆ ಗುಂಡಿಕ್ಕಿ ಕೊಂದರು;ಹೀಗಿದೆ ತಾಲಿಬಾನ್ ಶಿಕ್ಷೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2025, 4:10 IST
Last Updated 3 ಡಿಸೆಂಬರ್ 2025, 4:10 IST
Venugopala K.
   Venugopala K.

ಕಾಬೂಲ್: ಅಫ್ಗಾನಿಸ್ತಾನದ ಖೋಸ್ಟ್ ನಗರದಲ್ಲಿ ಒಂದೇ ಕುಟುಂಬದ 13 ಮಂದಿಯನ್ನು ಹತ್ಯೆ ಮಾಡಿದ್ದ ಅಪರಾಧಿಯನ್ನು ತಾಲಿಬಾನ್ ಆಡಳಿತ ಬಹಿರಂಗವಾಗಿ ಗುಂಡಿಕ್ಕಿ ಕೊಂದಿದೆ. 2021ರಲ್ಲಿ ತಾಲಿಬಾನ್ ಆಡಳಿತ ಪ್ರಾರಂಭವಾದಾಗಿನಿಂದ 11ನೇ ಮರಣದಂಡನೆ ಇದಾಗಿದೆ.

ಸಾರ್ವಜನಿಕವಾಗಿ ಮರಣದಂಡನೆ ವಿಧಿಸುತ್ತಿರುವುದು ಅಫ್ಗಾನಿಸ್ತಾನದಲ್ಲಿ ಷರಿಯಾ ಕಾನೂನಿನ ಮರಳುವಿಕೆಯನ್ನು ಸಹ ಗುರುತಿಸುತ್ತದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ವಿಧಿಸಲಾದ ಈ ಮರಣದಂಡನೆಯನ್ನು ಮೈದಾನದಲ್ಲಿ 80,000 ಜನರು ವೀಕ್ಷಿಸಿದ್ದಾರೆ.

ಅಫ್ಗಾನಿಸ್ತಾನದ ಸುಪ್ರೀಂ ಕೋರ್ಟ್‌ನ ಅಧಿಕೃತ ಹೇಳಿಕೆಯ ಪ್ರಕಾರ, ಅಬ್ದುಲ್ ರೆಹಮಾನ್ ಮತ್ತು ಆತನ ಕುಟುಂಬದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 13 ಜನರನ್ನು ಕೊಂದ ಅಪರಾಧಕ್ಕಾಗಿ ಮಂಗಲ್ ಎಂಬ ವ್ಯಕ್ತಿಗೆ ಮರಣದಂಡನೆ ವಿಧಿಸಲಾಗಿದೆ.

ADVERTISEMENT

ಈ ಆದೇಶವನ್ನು ಅಫ್ಗಾನಿಸ್ತಾನದ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಜಾದಾ ಅನುಮೋದಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

‘ಸಂತ್ರಸ್ತರ ಕುಟುಂಬಕ್ಕೆ ಕ್ಷಮೆ ಮತ್ತು ಶಿಕ್ಷೆಯ ಆಯ್ಕೆಯನ್ನು ನೀಡಲಾಗಿತ್ತು. ಆದರೆ,ಸಂತ್ರಸ್ತ ಕುಟುಂಬ ಕಿಸಾಸ್‌ಗೆ(‘ಕಣ್ಣಿಗೆ ಕಣ್ಣು’ ಎಂಬ ಇಸ್ಲಾಮಿಕ್ ತತ್ವ) ಒತ್ತಾಯಿಸಿದ ನಂತರ, ಮರಣದಂಡನೆ ಆದೇಶ ನೀಡಲಾಯಿತು’ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಹೇಳಿಕೆ ತಿಳಿಸಿದೆ.

ಅಫ್ಗಾನ್ ವರದಿಗಳ ಪ್ರಕಾರ, ತಾಲಿಬಾನ್ ಅಧಿಕಾರಿಗಳು ಮತ್ತು ಸಂತ್ರಸ್ತರ ಕುಟುಂಬ ಸೇರಿದಂತೆ ಸುಮಾರು 80,000 ಜನರು ಸಾರ್ವಜನಿಕ ಮರಣದಂಡನೆಯನ್ನು ವೀಕ್ಷಿಸಿದರು.

ಸಂತ್ರಸ್ತರ ಕುಟುಂಬದ ಸಂಬಂಧಿ 13 ವರ್ಷದ ಬಾಲಕ, ಮಂಗಲ್‌ಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

‘ಮೊದಲಿಗೆ ಕೊಲೆಗಾರನನ್ನು ಮೈದಾನಕ್ಕೆ ಕರೆತಂದರು. ವೈದ್ಯರು ಬಂದು ತಪಾಸಣೆ ನಡೆಸಿದರು. ಬಳಿಕ, ಷರಿಯಾ ಕಾನೂನಿನ ಪ್ರಕಾರ ಗುಂಡಿಕ್ಕಿ ಕೊಲ್ಲಲಾಯಿತು’ಎಂದು ಟೋಲೊ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.