ADVERTISEMENT

ಅಫ್ಗಾನಿಸ್ತಾನ: ಕಂದಾಹಾರ್‌ನ ಆಕಾಶವಾಣಿ ಕೇಂದ್ರ ತಾಲಿಬಾನ್‌ ವಶಕ್ಕೆ

ಏಜೆನ್ಸೀಸ್
Published 14 ಆಗಸ್ಟ್ 2021, 8:11 IST
Last Updated 14 ಆಗಸ್ಟ್ 2021, 8:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದ ದಕ್ಷಿಣ ಭಾಗದಲ್ಲಿರುವ ಬಹುತೇಕ ಸ್ಥಳಗಳಲ್ಲಿ ತನ್ನ ‍ಪ್ರಾಬಲ್ಯ ಸಾಧಿಸಿದ ಬೆನ್ನಲ್ಲೇ ತಾಲಿಬಾನ್‌ ಶನಿವಾರ ಕಂದಾಹಾರ್‌ನ ಆಕಾಶವಾಣಿ ಕೇಂದ್ರವನ್ನು ತನ್ನ ವಶಕ್ಕೆ ಪಡದಿದೆ.

ಇದಕ್ಕೆ ಸಂಬಂಧಿಸಿ ತಾಲಿಬಾನ್‌ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ‘ಈ ಆಕಾಶವಾಣಿ ಕೇಂದ್ರಕ್ಕೆ ‘ವಾಯ್ಸ್‌ ಆಫ್‌ ಷರಿಯಾ’ ಎಂದು ಮರುನಾಮಕರಣ ಮಾಡಲಾಗಿದೆ. ಸಂಸ್ಥೆಯ ಎಲ್ಲಾ ಸಿಬ್ಬಂದಿ ಆಕಾಶವಾಣಿ ಕೇಂದ್ರದಲ್ಲಿಯೇ ಇದ್ದಾರೆ. ಇಲ್ಲಿ ಸುದ್ದಿ, ರಾಜಕೀಯ ವಿಶ್ಲೇಷಣೆ ಮತ್ತು ಕುರಾನ್‌ ಪಠಣವನ್ನು ಪ್ರಸಾರ ಮಾಡಲಾಗುವುದು’ ಎಂದು ವಿಡಿಯೊದಲ್ಲಿ ತಿಳಿಸಲಾಗಿದೆ.

ಈ ಕೇಂದ್ರದಿಂದ ಸಂಗೀತ ಪ್ರಸಾರವಾಗುವ ಸಾಧ್ಯತೆಗಳು ಕಡಿಮೆ ಎಂದು ಮೂಲಗಳು ಹೇಳಿವೆ.

ADVERTISEMENT

ಇತ್ತೀಚಿಗಿನ ವಾರಗಳಲ್ಲಿ ಅಫ್ಗಾನಿಸ್ತಾನದ ಉತ್ತರ, ಪಶ್ಚಿಮ ಮತ್ತು ದಕ್ಷಿಣ ಭಾಗದ ಬಹುತೇಕ ಪ್ರದೇಶಗಳನ್ನು ತಾಲಿಬಾನ್‌ ವಶಕ್ಕೆ ಪಡೆದಿದೆ.

ಹಿಂದೂ, ಸಿಖ್ಖರ ಸ್ಥಳಾಂತರ: ಅಮಿತ್‌ ಶಾಗೆ ಮನವಿ

ಅಫ್ಗಾನಿಸ್ತಾನದಲ್ಲಿ ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿದೆ. ಹಾಗಾಗಿ ಅಲ್ಲಿನ ಹಿಂದೂ ಮತ್ತು ಸಿಖ್‌ ಕುಟುಂಬಗಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆವರ್ಲ್ಡ್‌ ಪಂಜಾಬಿ ಆರ್ಗನೈಜೇಷನ್‌ (‍ಡಬ್ಲ್ಯುಪಿಓ) ಮನವಿ ಮಾಡಿದೆ.

‘ಅಫ್ಗಾನ್‌ ಮೂಲದ ಸಿಖ್ಖರು ಮತ್ತು ಹಿಂದೂಗಳ ಪ್ರಾಣಕ್ಕೆ ಅಪಾಯವಿದೆ. ಹಾಗಾಗಿ ಅಲ್ಲಿಂದ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಅವಶ್ಯಕತೆಯಿದೆ’ ಎಂದು ಡಬ್ಲ್ಯುಪಿಓನ ಅಂತರರಾಷ್ಟ್ರೀಯ ಅಧ್ಯಕ್ಷ ವಿಕ್ರಂಜೀತ್‌ ಸಿಂಗ್‌ ಸಾಹ್ನಿ ಒತ್ತಾಯಿಸಿದ್ದಾರೆ.

‘ಅಫ್ಗಾನಿಸ್ತಾನದಿಂದ ಆಗಮಿಸುವವರ ಪುನರ್ವಸತಿಗೆ ಸಂಬಂಧಿಸಿದ ಅಗತ್ಯ ಕೆಲಸಗಳನ್ನು ಮಾಡಲು ಸಂಸ್ಥೆ ಸಿದ್ಧವಿದೆ. ಅಲ್ಲದೆ ಅವರಿಗೆ ಉದ್ಯೋಗ ಆಧಾರಿತ ಕೋರ್ಸ್‌ಗಳ ತರಬೇತಿಯನ್ನು ಉಚಿತವಾಗಿ ನೀಡುತ್ತೇವೆ’ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಭಾರತಕ್ಕೆ ಬಂದಿರುವವರಿಗೆ ದೀರ್ಘಾವಧಿಯ ವೀಸಾಗಳನ್ನು ನೀಡಿದ್ದಕ್ಕಾಗಿ ಗೃಹ ಸಚಿವರಿಗೆ ಸಾಹ್ನಿ ಧನ್ಯವಾದ ತಿಳಿಸಿದರು. ಜತೆಗೆ, ಪೌರತ್ವ ತಿದ್ದುಪಡಿ ಕಾಯ್ದೆಯಡಿ ಅವರಿಗೆ ಪೌರತ್ವವನ್ನು ನೀಡುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.