ADVERTISEMENT

ಕಾಬೂಲ್‌: ಆತ್ಮಾಹುತಿ ದಾಳಿಕೋರನ ಮೇಲೆ ಅಮೆರಿಕ ವಾಯು ದಾಳಿ

ಏಜೆನ್ಸೀಸ್
Published 29 ಆಗಸ್ಟ್ 2021, 15:26 IST
Last Updated 29 ಆಗಸ್ಟ್ 2021, 15:26 IST
ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಮಗುವೊಂದನ್ನು ಹೊತ್ತು ಸಾಗುತ್ತಿರುವ ಅಮೆರಿಕ ಭದ್ರತಾ ಪಡೆಯ ಸಿಬ್ಬಂದಿ–ಸಂಗ್ರಹ ಚಿತ್ರ
ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಮಗುವೊಂದನ್ನು ಹೊತ್ತು ಸಾಗುತ್ತಿರುವ ಅಮೆರಿಕ ಭದ್ರತಾ ಪಡೆಯ ಸಿಬ್ಬಂದಿ–ಸಂಗ್ರಹ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದ ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಬಹುದಾಗಿದ್ದ ಮತ್ತೊಂದು ಆತ್ಮಹತ್ಯಾ ಬಾಂಬ್‌ ದಾಳಿಯನ್ನು ಅಮೆರಿಕ ಭದ್ರತಾ ಪಡೆಗಳು ತಪ್ಪಿಸಿವೆ. ಆತ್ಮಾಹುತಿ ದಾಳಿಕೋರನನ್ನು ಗುರಿಯಾಗಿಸಿ ಭಾನುವಾರ ವಾಯು ದಾಳಿ ನಡೆಸಲಾಗಿದೆ.

ಕಾಬೂಲ್‌ ವಿಮಾನ ನಿಲ್ದಾಣದ ಸಮೀಪದಲ್ಲೇ ಎರಡು ರಾಕೆಟ್‌ ದಾಳಿ ನಡೆದಿರುವುದು ವರದಿಯಾಗಿರುವ ಬೆನ್ನಲ್ಲೇ ಈ ಸುದ್ದಿ ಹೊರ ಬಂದಿದೆ. ಮನೆಯೊಂದಕ್ಕೆ ರಾಕೆಟ್‌ ಅಪ್ಪಳಿಸಿ ಮಗುವೊಂದು ಮೃತಪಟ್ಟಿರುವುದು ವರದಿಯಾಗಿದೆ. ಎರಡೂ ದಾಳಿಗಳ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ. ಯಾವುದೇ ಸಂಘನೆಯು ದಾಳಿಯ ಹೊಣೆ ಹೊತ್ತಿಲ್ಲ.

ವಾಹನವೊಂದರಲ್ಲಿ ಸ್ಫೋಟಕಗಳನ್ನು ತುಂಬಿಕೊಂಡು ಆತ್ಮಾಹುತಿ ದಾಳಿಕೋರ ಸಾಗುತ್ತಿರುವಾಗ ಅಮೆರಿಕ ಪಡೆಗಳು ವಾಯು ದಾಳಿ ನಡೆಸಿರುವುದಾಗಿ ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ಅಮೆರಿಕ ಸೇನೆಯು ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು, ಈ ನಡುವೆ ವಿಮಾನ ನಿಲ್ದಾಣದಲ್ಲಿ ಮತ್ತೊಂದು ದಾಳಿ ಸಾಧ್ಯತೆಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಎಚ್ಚರಿಕೆ ನೀಡಿದ್ದರು.

ಮಂಗಳವಾರದೊಳಗೆ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಬೈಡನ್‌ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಐಸಿಸ್‌ ಆತ್ಮಾಹುತಿ ದಾಳಿಕೋರರು ನಡೆಸಿದ ದಾಳಿಯಲ್ಲಿ ಸುಮಾರು 180 ಜನರು ಸಾವಿಗೀಡಾಗಿದ್ದರು. ಅನಂತರದಲ್ಲಿ ಕಾಬೂಲ್‌ ವಿಮಾನ ನಿಲ್ದಾಣದ ಸುತ್ತಲೂ ತಾಲಿಬಾನ್‌ ಭದ್ರತೆ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.