ADVERTISEMENT

ಕಾಬೂಲ್‌ ಹೋಟೆಲ್‌ಗಳಲ್ಲಿ ಉಳಿಯದಂತೆ ಪ್ರಜೆಗಳಿಗೆ ಬ್ರಿಟನ್, ಅಮೆರಿಕ ಎಚ್ಚರಿಕೆ

ಏಜೆನ್ಸೀಸ್
Published 11 ಅಕ್ಟೋಬರ್ 2021, 5:39 IST
Last Updated 11 ಅಕ್ಟೋಬರ್ 2021, 5:39 IST
ಬಂದೂಕುಧಾರಿಯೊಬ್ಬರ 2018ರಲ್ಲಿ ಕಾಬೂಲ್‌ನ ಹೋಟೆಲ್‌ವೊಂದರ ಮೇಲೆ ನಡೆದ ದಾಳಿ ನಡೆಸಿದಾಗಿನ ದೃಶ್ಯ (ಸಂಗ್ರಹ ಚಿತ್ರ)
ಬಂದೂಕುಧಾರಿಯೊಬ್ಬರ 2018ರಲ್ಲಿ ಕಾಬೂಲ್‌ನ ಹೋಟೆಲ್‌ವೊಂದರ ಮೇಲೆ ನಡೆದ ದಾಳಿ ನಡೆಸಿದಾಗಿನ ದೃಶ್ಯ (ಸಂಗ್ರಹ ಚಿತ್ರ)   

ಕಾಬೂಲ್: ಇಲ್ಲಿನ ಜನಪ್ರಿಯ ಹೋಟೆಲ್‌ ಸೆರೆನಾ ಸೇರಿದಂತೆ, ಅದರ ಸುತ್ತಮುತ್ತಲಿರುವ ಯಾವುದೇ ಐಷಾರಾಮಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಮಾಡದಂತೆ ಅಮೆರಿಕ ಮತ್ತು ಬ್ರಿಟನ್‌ ಸೋಮವಾರ ತಮ್ಮ ಪ್ರಜೆಗಳನ್ನು ಎಚ್ಚರಿಸಿದೆ.

ಭದ್ರತಾ ಬೆದರಿಕೆಗಳಿರುವ ಹಿನ್ನೆಲೆಯಲ್ಲಿ, ಸೆರೆನಾ ಅಥವಾ ಅದರ ಸಮೀಪವಿರುವ ಹೋಟೆಲ್‌ಗಳಲ್ಲಿ ನೆಲೆಸಿರುವ ಅಮೆರಿಕ ಪ್ರಜೆಗಳು ತಕ್ಷಣವೇ ಅಲ್ಲಿಂದ ನಿರ್ಗಮಿಸುವಂತೆ ಅಮೆರಿಕ ಸರ್ಕಾರ ತಿಳಿಸಿದೆ.

ಬ್ರಿಟನ್ ವಿದೇಶಾಂಗ ಸಚಿವಾಲಯ ಅಫ್ಗಾನಿಸ್ತಾನಕ್ಕೆ ಹೋಗದಂತೆ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. ಹೆಚ್ಚಿನ ಅಪಾಯಗಳ ಮುನ್ಸೂಚನೆಯ ಹಿನ್ನೆಲೆಯಲ್ಲಿ, ಕಾಬೂಲ್‌ನಲ್ಲಿರುವ (ಸೆರೆನಾ ಹೋಟೆಲ್‌ನಂತಹ) ಹೋಟೆಲ್‌ಗಳಲ್ಲಿ ಉಳಿಯದಂತೆಯೂ ಸಲಹೆ ನೀಡಿದೆ.

ಸೆರೆನಾ, ಕಾಬೂಲ್‌ನಲ್ಲಿರುವ ಜನಪ್ರಿಯ ಐಶಾರಾಮಿ ಹೋಟೆಲ್‌ ಆಗಿದ್ದು, ಅಫ್ಗಾನಿಸ್ತಾನ ತಾಲಿಬಾನರ ಕೈವಶವಾಗುವ ಮುನ್ನ, ಇದೇ ಹೋಟೆಲ್‌ನಲ್ಲೇ ಹೆಚ್ಚು ವಿದೇಶಿಯರು ವಾಸ್ತವ್ಯ ಮಾಡುತ್ತಿದ್ದರು. ಇತ್ತೀಚೆಗೆ ಎರಡು ಬಾರಿ ಈ ಹೋಟೆಲ್‌ ಭಯೋತ್ಪಾದಕರ ದಾಳಿಗೆ ಗುರಿಯಾಗಿದೆ.

ಇಸ್ಲಾಮಿಕ್ ಸ್ಟೇಟ್ ಉಗ್ರರು ಕಳೆದ ಶುಕ್ರವಾರ ಉತ್ತರ ಅಫ್ಗಾನಿಸ್ತಾನದ ಕುಂಡುಜ್‌ನ ಮಸೀದಿ ಮೇಲೆ ಆತ್ಮಾಹತ್ಯಾ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಅಮೆರಿಕ ಮತ್ತು ಬ್ರಿಟನ್ ಸರ್ಕಾರಗಳು ಈ ರೀತಿ ಪ್ರಜೆಗಳಿಗೆ ಸೂಚನೆ ನೀಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.