ಪುತ್ರಜಯ: ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ಐದು ದಿನಗಳಿಂದ ನಡೆಯುತ್ತಿದ್ದ ಗಡಿ ಸಂಘರ್ಷ ಶಮನಗೊಂಡಿದ್ದು, ತಕ್ಷಣದಿಂದಲೇ ಬೇಷರತ್ ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.
ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ಆಸಿಯಾನ್) ಪ್ರಾದೇಶಿಕ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆದಿದ್ದು, ಸಹಜ ಸ್ಥಿತಿಗೆ ಮರಳಲು ಅಗತ್ಯ ಕ್ರಮ ಕೈಗೊಳ್ಳಲು ಎರಡೂ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ತಿಳಿಸಿದ್ದಾರೆ.
ಕಾಂಬೋಡಿಯಾ ಪ್ರಧಾನ ಮಂತ್ರಿ ಹನ್ ಮಾನೆಟ್ ಹಾಗೂ ಥಾಯ್ಲೆಂಡ್‌ನ ಹಂಗಾಮಿ ಪ್ರಧಾನ ಮಂತ್ರಿ ಫುಮ್ತಮ್ ವೇಚಯಾಚೈ ಅವರು, ಕದನ ವಿರಾಮ ಜಾರಿಗೆ ಬರುವಂತೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದು ಶಾಂತಿ ಮತ್ತು ಭದ್ರತೆ ಪುನರ್ ಸ್ಥಾಪಿಸಲು ಪ್ರಮುಖ ಹೆಜ್ಜೆಯಾಗಿದೆ. ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಹಾಗೂ ವಿವಾದವನ್ನು ಶಮನಗೊಳಿಸಲು ಉಭಯ ದೇಶಗಳ ಮಿಲಿಟರಿ ಹಾಗೂ ಅಧಿಕಾರಿಗಳು ಸಭೆ ನಡೆಸಲಿದ್ದಾರೆ.
ಶಾಂತಿಯನ್ನು ಖಚಿತಪಡಿಸಿಕೊಳ್ಳಲು, ಕದನ ವಿರಾಮದ ಮೇಲ್ವಿಚಾರಣೆ ನಡೆಸಲು ವಿವರವಾದ ಕಾರ್ಯವಿಧಾನವನ್ನು ರೂಪಿಸುವಂತೆ ಮಲೇಷ್ಯಾ, ಕಾಂಬೋಡಿಯಾ ಹಾಗೂ ಥಾಯ್ಲೆಂಡ್‌ನ ವಿದೇಶಾಂಗ ಹಾಗೂ ರಕ್ಷಣಾ ಸಚಿವರಿಗೆ ಸೂಚಿಸಲಾಗಿದೆ ಎಂದು ಅನ್ವರ್ ತಿಳಿಸಿದ್ದಾರೆ.
ದ್ವಿಪಕ್ಷೀಯ ಸಂಬಂಧಗಳು ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳುವ ವಿಶ್ವಾಸವಿದೆ. ಎರಡೂ ಕಡೆಗಳಲ್ಲಿ ಸ್ಥಳಾಂತರಿಸಲಾಗಿರುವ 3 ಲಕ್ಷ ಗ್ರಾಮಸ್ಥರು ಮನೆಗೆ ತಲುಪುವ ನಿರೀಕ್ಷೆ ಇದೆ. ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ನಡುವೆ ನಂಬಿಕೆ, ಆತ್ಮವಿಶ್ವಾಸ ಹಾಗೂ ಸಹಕಾರವನ್ನು ಪುನರ್ ನಿರ್ಮಿಸುವ ಸುಸಮಯ ಆರಂಭವಾಗಿದೆ ಎಂದು ಹುನ್ ಮಾನೆಟ್ ತಿಳಿಸಿದ್ದಾರೆ.
ಇದು ಶಾಂತಿಯುತ ನಿರ್ಣಯಕ್ಕಾಗಿ ಥಾಯ್ಲೆಂಡ್‌ನ ಬಯಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಫುಮ್ತಮ್ ಹೇಳಿದರು.
ಕಳೆದ ಗುರುವಾರ ಗಡಿಯಲ್ಲಿ ನೆಲ ಬಾಂಬ್ ಸ್ಫೋಟಗೊಂಡು ಥಾಯ್ಲೆಂಡ್‌ನ ಐವರು ಸೈನಿಕರು ಗಾಯಗೊಂಡ ಬಳಿಕ ಸಂಘರ್ಷ ಭುಗಿಲೆದ್ದಿತ್ತು. ಎರಡು ದೇಶಗಳ ನಡುವಿನ ಕ್ಷಿಪಣಿ ದಾಳಿ ನಡೆದಿದ್ದು, 35 ಜನರು ಮೃತಪಟ್ಟಿದ್ದರು. 2.60 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಎರಡೂ ದೇಶಗಳು ರಾಯಭಾರ ಕಚೇರಿ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿದ್ದವು. ಕಾಂಬೋಡಿಯಾದೊಂದಿಗೆ ಹಂಚಿಕೊಂಡಿದ್ದ ಈಶಾನ್ಯ ಗಡಿಯನ್ನು ಥಾಯ್ಲೆಂಡ್ ಮುಚ್ಚಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.