ಪನಾಮಾ ಸಿಟಿ/ನವದೆಹಲಿ: ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಪಡೆಗಳು ನಡೆಸಿದ ಕಾರ್ಯಾಚರಣೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಹೊಗಳಿದ ಬೆನ್ನಲ್ಲೇ, ಅವರ ಮತ್ತು ಪಕ್ಷದ ಕೆಲ ನಾಯಕರ ನಡುವಿನ ಜಟಾಪಟಿ ತೀವ್ರಗೊಂಡಿದೆ.
‘ಆಪರೇಷನ್ ಸಿಂಧೂರ’ ಶ್ಲಾಘಿಸಿದ ತಮ್ಮ ನಡೆಯನ್ನು ಟೀಕಿಸಿದವರ ವಿರುದ್ಧ ತರೂರ್ ಹರಿಹಾಯ್ದಿದ್ದಾರೆ. ಇನ್ನೊಂದೆಡೆ, 2018ರಲ್ಲಿ ಪ್ರಕಟವಾಗಿರುವ ತರೂರ್ ಅವರ ಕೃತಿ ‘ದಿ ಪ್ಯಾರಡಾಕ್ಸಿಕಲ್ ಪ್ರೈಮ್ ಮಿನಿಸ್ಟರ್: ನರೇಂದ್ರ ಮೋದಿ ಅಂಡ್ ಹಿಸ್ ಇಂಡಿಯಾ’ದ ಕೆಲ ಭಾಗಗಳನ್ನು ಉಲ್ಲೇಖಿಸುವ ಮೂಲಕ ಕಾಂಗ್ರೆಸ್ ಮುಖಂಡರು ತರೂರ್ ಅವರಿಗೆ ತಿರುಗೇಟು ನೀಡಿದ್ದಾರೆ.
‘ಮೋದಿ ನೇತೃತ್ವದ ಸರ್ಕಾರ ಸಶಸ್ತ್ರ ಪಡೆಗಳ ಕಾರ್ಯವನ್ನು ರಾಜಕೀಯಗೊಳಿಸುವುದಕ್ಕೆ ಹಿಂಜರಿಯಲಿಲ್ಲ’ ಎಂದು ತರೂರ್ ಈ ಕೃತಿಯಲ್ಲಿ ಟೀಕಿಸಿದ್ದಾರೆ. ಪುಸ್ತಕದ ಈ ಭಾಗಗಳನ್ನು ಕಾಂಗ್ರೆಸ್ ನಾಯಕ ಪವನ್ ಖೇರಾ ಹಂಚಿಕೊಂಡು, ತರೂರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತರೂರ್ ಹೇಳಿಕೆ: ‘ದೇಶದಲ್ಲಿ ಇತ್ತೀಚಿನ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿರುವ ಬಗ್ಗೆ ಮಾತ್ರ ನಾನು ಮಾತನಾಡಿರುವೆ. ಈ ಹಿಂದಿನ ಯುದ್ಧಗಳ ಕುರಿತಲ್ಲ’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ ಹೇಳಿದ್ದಾರೆ.
‘ಆಪರೇಷನ್ ಸಿಂಧೂರ’ ಶ್ಲಾಘಿಸಿ ತಾವು ನೀಡಿರುವ ಹೇಳಿಕೆಗಳಿಗೆ ಸಂಬಂಧಿಸಿ ಅಪಸ್ವರ ಎತ್ತಿರುವ ಪಕ್ಷದ ಕೆಲ ನಾಯಕರಿಗೆ ಅವರು ಈ ಮೂಲಕ ತಿರುಗೇಟು ನೀಡಿದ್ದಾರೆ.
ಪನಾಮಾ ಸಿಟಿಯಲ್ಲಿ ಮಾತನಾಡಿದ್ದ ತರೂರ್, ‘ಮೊದಲ ಬಾರಿಗೆ ಭಾರತೀಯ ಪಡೆಗಳು ಎಲ್‌ಒಸಿ ದಾಟಿ, ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ನಿರ್ದಿಷ್ಟ ದಾಳಿ ನಡೆಸಿವೆ. ಇಂತಹ ಕಾರ್ಯಾಚರಣೆಯನ್ನು ನಾವು ಈ ಹಿಂದೆ ಕೈಗೊಂಡಿರಲಿಲ್ಲ’ ಎಂದು ಹೇಳಿದ್ದರು.
ತರೂರ್ ಅವರ ಹೇಳಿಕೆಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕ ಉದಿತ್ ರಾಜ್, ‘ತರೂರ್ ಅವರನ್ನು ಬಿಜೆಪಿ ಶೀಘ್ರವೇ ಪಕ್ಷದ ಸೂಪರ್ ವಕ್ತಾರರನ್ನಾಗಿ ಮಾಡಬೇಕು’ ಎಂದು ಟೀಕಿಸಿದ್ದರು.
‘ಕಾಂಗ್ರೆಸ್ ಪಕ್ಷವನ್ನು ನಾಶ ಮಾಡುವ ಪಿತೂರಿ ಭಾಗವಾಗಿ ತರೂರ್ ಇಂಥ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಗಳು ಆರು ಬಾರಿ ನಿರ್ದಿಷ್ಟ ದಾಳಿಗಳನ್ನು ನಡೆಸಿವೆ. ಆದರೆ, ಅವುಗಳ ಶ್ರೇಯ ತೆಗೆದುಕೊಂಡಿಲ್ಲ’ ಎಂದು ಉದಿತ್ ರಾಜ್ ಟೀಕಿಸಿದ್ದಾರೆ.
ತಮ್ಮ ಹೇಳಿಕೆಗಳ ಬಗ್ಗೆ ಸ್ವಪಕ್ಷೀಯರೇ ಟೀಕೆ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ತರೂರ್, ‘ಕೆಲವು ಟೀಕಾಕಾರರು ಹಾಗೂ ಟ್ರೋಲ್ ಮಾಡುವವರು ನನ್ನ ಅಭಿಪ್ರಾಯ ಮತ್ತು ಮಾತುಗಳನ್ನು ತಿರುಚುತ್ತಿದ್ದು, ಅದನ್ನು ಸ್ವಾಗತಿಸುವೆ. ಅವರಿಗೆ ಸರಿ ಎನಿಸಿದ್ದನ್ನು ಅವರು ಮಾಡಲಿ. ನಾನು ಹಲವು ಉತ್ತಮ ಕಾರ್ಯ ಮಾಡಬೇಕಿದ್ದು, ಅದನ್ನು ಮುಂದುವರಿಸುವೆ’ ಎಂದು ಹೇಳಿದ್ದಾರೆ.
ಶಶಿ ತರೂರ್ ಪಕ್ಷವನ್ನು ಟೀಕಿಸುವ ಬದಲು ತಮ್ಮ ಕರ್ತವ್ಯ ನಿಭಾಯಿಸಲಿ. ಕಾಂಗ್ರೆಸ್ ನೇತೃತ್ವದ ಸರ್ಕಾರ ಇಂತಹ ಕಾರ್ಯಾಚರಣೆ ಕೈಗೊಂಡಿದೆ. ಆದರೆ ಪ್ರಚಾರ ಮಾಡಿಲ್ಲಉದಿತ್ ರಾಜ್ ಕಾಂಗ್ರೆಸ್ ಮುಖಂಡ
ಈ ವಿಚಾರದಲ್ಲಿ ಹಗೆತನ ಇಲ್ಲ. ಜೈರಾಮ್ ರಮೇಶ್ ಹಾಗೂ ಪವನ್ ಖೇರಾ ಅವರು ತಪ್ಪು ಕಲ್ಪನೆ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರಷ್ಟೆರಣದೀಪ್ ಸುರ್ಜೇವಾಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಕಾಂಗ್ರೆಸ್ ಏನನ್ನು ಬಯಸುತ್ತದೆ? ಸಂಸದರು ವಿದೇಶಗಳಿಗೆ ಹೋಗಿ ಭಾರತ ಮತ್ತು ನಮ್ಮ ಪ್ರಧಾನಿ ವಿರುದ್ಧ ಮಾತನಾಡಬೇಕೇ?ಕಿರಣ್ ರಿಜಿಜು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.