ADVERTISEMENT

ಬಾಯಿಯ ಮೂಲಕ ಹೀರಿಕೊಳ್ಳುವ ಕೋವಿಡ್ ಲಸಿಕೆ ಹಾಕಲು ಆರಂಭಿಸಿದ ಚೀನಾ

ಏಜೆನ್ಸೀಸ್
Published 26 ಅಕ್ಟೋಬರ್ 2022, 13:08 IST
Last Updated 26 ಅಕ್ಟೋಬರ್ 2022, 13:08 IST
   

ಬೀಜಿಂಗ್: ಚೀನಾದ ಶಾಂಘೈ ನಗರದಲ್ಲಿ ಬುಧವಾರದಂದು ಬಾಯಿಯ ಮೂಲಕ ಹೀರಿಕೊಳ್ಳುವ ಕೋವಿಡ್ -19 ಲಸಿಕೆಯನ್ನು ನೀಡಲು ಪ್ರಾರಂಭಿಸಲಾಗಿದ್ದು, ಜಗತ್ತಿನಲ್ಲೇ ಇಂತಹ ಲಸಿಕೆ ನೀಡುತ್ತಿರುವ ಮೊದಲನೆಯ ದೇಶ ಎನ್ನಲಾಗಿದೆ.

ಶಾಂಘೈ ನಗರ ಆಡಳಿತದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯ ಪ್ರಕಟಣೆಯ ಪ್ರಕಾರ, ಈ ಹಿಂದೆ ಲಸಿಕೆ ಪಡೆದ ಜನರಿಗೆ ಬೂಸ್ಟರ್ ಡೋಸ್‌ ಆಗಿ ಬಾಯಿಯ ಮೂಲಕ ಹೀರಿಕೊಳ್ಳುವ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ.


ಇಂತಹ ಸೂಜಿ-ಮುಕ್ತ ಲಸಿಕೆಗಳು ದುರ್ಬಲವಾದ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ದೇಶಗಳಲ್ಲಿ ಲಸಿಕೆ ಅಭಿಯಾನವನ್ನು ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುತ್ತದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಏಕೆಂದರೆ ಈ ಲಸಿಕೆಗಳ ನಿರ್ವಹಣೆ ಅತ್ಯಂತ ಸುಲಭವಾಗಿದೆ. ಹೀಗಾಗಿ, ತೋಳಿಗೆ ಚುಚ್ಚುಮದ್ದು ಪಡೆಯಲು ಇಷ್ಟಪಡದ ಜನರನ್ನು ಮನವೊಲಿಸಬಹುದು.

ADVERTISEMENT

ಆರ್ಥಿಕತೆಗೆ ಪೆಟ್ಟು ಕೊಡುತ್ತಿರುವ ಮತ್ತು ಪ್ರಪಂಚದ ಉಳಿದ ಭಾಗಗಳೊಂದಿಗೆ ಸಂಪರ್ಕ ಕಡಿತಗೊಳಿಸಿರುವ ದೇಶದ ಕೆಲ ಭಾಗಗಳ ಕಟ್ಟುನಿಟ್ಟಾದ ಕೋವಿಡ್ ನಿರ್ಬಂಧಗಳನ್ನು ಸಡಿಲಿಸುವ ಮೊದಲು ಹೆಚ್ಚಿನ ಜನರು ಮುನ್ನೆಚರಿಕೆ ಡೋಸ್ ಲಸಿಕೆಗಳನ್ನು ಪಡೆಯಬೇಕೆಂದು ಚೀನಾ ಬಯಸಿದೆ.

ಅಕ್ಟೋಬರ್ ಮಧ್ಯದ ಹೊತ್ತಿಗೆ, ಶೇಕಡ 9೦ರಷ್ಟು ಚೀನಿಯರು ಸಂಪೂರ್ಣ(ಎರಡು ಡೋಸ್) ಲಸಿಕೆಯನ್ನು ಪಡೆದಿದ್ದರೆ, ಶೇಕಡ 57 ರಷ್ಟು ಜನರು ಬೂಸ್ಟರ್ ಡೋಸ್ ಪಡೆದಿದ್ದರು.

ಚೀನಾದ ಆನ್‌ಲೈನ್ ಸುದ್ದಿ ತಾಣ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನರು ಅರೆಪಾರದರ್ಶಕ ಬಿಳಿ ಕಪ್‌ನ ಸಣ್ಣ ನಳಿಕೆಯನ್ನು ತಮ್ಮ ಬಾಯಿಗೆ ಅಂಟಿಸಿಕೊಂಡಿರುವುದನ್ನು ಕಾಣಬಹುದಾಗಿದೆ.

ನಿಧಾನವಾಗಿ ಉಸಿರಾಟದ ಮೂಲಕ ಲಸಿಕೆಯನ್ನು ಹೀರಿಕೊಂಡ ನಂತರ, ಜನರು ತಮ್ಮ ಉಸಿರನ್ನು ಐದು ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳುತ್ತಾರೆ. ಸಂಪೂರ್ಣ ಲಸಿಕೆ ಹಾಕುವ ಕಾರ್ಯವಿಧಾನವು 20 ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ಅ,ಲ್ಲಿ ಬರೆಯಲಾಗಿದ್ದ ಪಠ್ಯದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.