ADVERTISEMENT

ಹದಗೆಡುತ್ತಿರುವ ಅಫ್ಗನ್ ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 3:13 IST
Last Updated 29 ಆಗಸ್ಟ್ 2021, 3:13 IST
ಕಾಬೂಲ್ ಸೆಂಟ್ರಲ್ ಬ್ಯಾಂಕ್ ಸಮೀಪ ಜನರು ಶನಿವಾರ ಪ್ರತಿಭಟನೆ ನಡೆಸಿದರು.
ಕಾಬೂಲ್ ಸೆಂಟ್ರಲ್ ಬ್ಯಾಂಕ್ ಸಮೀಪ ಜನರು ಶನಿವಾರ ಪ್ರತಿಭಟನೆ ನಡೆಸಿದರು.    

ಕಾಬೂಲ್ (ಎಎಫ್‌ಪಿ/ಎಪಿ): ತಾಲಿಬಾನ್ ವಶವಾದ ಬಳಿಕ ಅಫ್ಗಾನಿಸ್ತಾನದ ಸ್ಥಿತಿ ಶೋಚನೀಯವಾಗುತ್ತಿದೆ. ನೂರಾರು ಅಫ್ಗನ್ ನಾಗರಿಕರು ಕಾಬೂಲ್‌ನ ಬ್ಯಾಂಕ್ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಎಟಿಎಂನಿಂದ ಹಣ ಹಿಂತೆಗೆದುಕೊಳ್ಳಲು ಜನರು ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.

ಅಫ್ಗಾನಿಸ್ತಾನದಲ್ಲಿ ತೀವ್ರ ಬರಗಾಲ ಎದುರಾಗಲಿದ್ದು, ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಗುರುವಾರ ನಡೆದ ಆತ್ಮಾಹುತಿ ದಾಳಿಯಲ್ಲಿ 169 ಅಫ್ಗನ್ನರು ಮತ್ತು 13 ಅಮೆರಿಕದ ಸೈನಿಕರು ಬಲಿಯಾಗಿದ್ದರೂ,ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ.

ಪ್ರತಿಭಟನೆ: ಕಾಬೂಲ್‌ ಬ್ಯಾಂಕ್ ಎದುರು ಶನಿವಾರ ಭಾರಿ ಪ್ರತಿಭಟನೆ ನಡೆಯಿತು. ಸರ್ಕಾರಿ ನೌಕರರು ತಮ್ಮ ವೇತನ ಪಾವತಿಗೆ ಆಗ್ರಹಿಸಿ ಧರಣಿ ನಡೆಸಿದರು. ಕಳೆದ ಆರು ತಿಂಗಳಿಂದ ಬಾಕಿ ಇರುವ ಸಂಬಳ ಪಾವತಿಗೆ ಅವರು ಬೇಡಿಕೆ ಇಟ್ಟಿದ್ದಾರೆ. ಮೂರು ದಿನಗಳ ಹಿಂದೆ ಬ್ಯಾಂಕ್‌ಗಳು ಪುನರಾರಂಭವಾಗಿದ್ದರೂ, ಯಾರಿಗೂ ಹಣ ಹಿಂಪಡೆಯಲು ಆಗಿಲ್ಲ ಎಂದು ಆರೋಪಿಸಿದ್ದಾರೆ. ಎಟಿಎಂ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದರೂ, ದಿನವೊಂದಕ್ಕೆ 200 ಡಾಲರ್ ಮಾತ್ರ ವಿತ್‌ಡ್ರಾ ಮಾಡಲು ಅವಕಾಶವಿದೆ. ಹೀಗಾಗಿ, ಜನರ ದೊಡ್ಡ ಸಾಲು ಕಂಡುಬರುತ್ತಿದೆ.

ADVERTISEMENT

ಬರದ ಭೀತಿ: ದೇಶದಲ್ಲಿ ತೀವ್ರ ಬರ ಎದುರಾಗಲಿದ್ದು, ಸುಮರು 70 ಲಕ್ಷ ಜನರ ಬದುಕು ಅಪಾಯಕ್ಕೆ ಸಿಲುಕಲಿದೆ ಎಂದು ರೋಮ್‌ ಮೂಲದ ಆಹಾರ ಮತ್ತು ಕೃಷಿ ಸಂಘಟನೆ ಎಚ್ಚರಿಕೆ ನೀಡಿದೆ. ಬರದ ಜೊತೆಗೆ ಕೋವಿಡ್ ಹಾಗೂ ಸ್ಥಳಾಂತರದ ಸಮಸ್ಯೆಯನ್ನು ಜನರು ಒಟ್ಟೊಟ್ಟಿಗೇ ಎದುರಿಸಬೇಕಿದೆ ಎಂದು ಸಂಸ್ಥೆ ತಿಳಿಸಿದೆ. 1.4 ಕೋಟಿ ಜನರು ಅಥವಾ ಪ್ರತಿ ಮೂವರು ಅಫ್ಗನ್ನರಲ್ಲಿ ಒಬ್ಬರಿಗೆ ತುರ್ತು ಆಹಾರದ ಅಗತ್ಯ ಬೀಳಲಿದೆ ಎಂದು ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮ ವೇದಿಕೆಯು, ಇದೇ ತಿಂಗಳ ಆರಂಭದಲ್ಲಿ ಎಚ್ಚರಿಸಿತ್ತು.

ವಿಶ್ವಸಂಸ್ಥೆ ಮತ್ತು ಇತರ ಮಿತ್ರರಾಷ್ಟ್ರಗಳ ಮೂಲಕ ಅಫ್ಗಾನಿಸ್ತಾನಕ್ಕೆ ನೆರವು ನೀಡಲಾಗುವುದು ಎಂದು ಅಮೆರಿಕ ತಿಳಿಸಿದೆ. ತಾಲಿಬಾನ್ ಈ ಮೊದಲು ನೀಡಿದ ಭರವಸೆಯಂತೆ ಉತ್ತಮ ಸರ್ಕಾರ ನೀಡಿದಲ್ಲಿ, ಅದರ ಜೊತೆ ಸಂಬಂಧ ಮುಂದುವರಿಸುವುದಾಗಿ ತಿಳಿಸಿದೆ.ಆತ್ಮಾಹುತಿ ದಾಳಿಯ ನಂತರ ದೊಡ್ಡ ಜನಸಂದಣಿಯನ್ನು ನಿಯಂತ್ರಿಸಲು ತಾಲಿಬಾನ್ ಶನಿವಾರ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದ ಎಲ್ಲ ರಸ್ತೆಗಳಲ್ಲಿ ತಾಲಿಬಾನ್ ಸೈನಿಕರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ತಡೆ
ಅಮೆರಿಕ ಹಾಗೂ ನ್ಯಾಟೋ ಪಡೆಗಳು ಬಳಸಿದ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಅಫ್ಗಾನಿಸ್ತಾನದಿಂದ ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ಪಾಕಿಸ್ತಾನದ ಕಸ್ಟಮ್ಸ್ ಅಧಿಕಾರಿಗಳು ಶನಿವಾರ ವಿಫಲಗೊಳಿಸಿದ್ದಾರೆ.

ತೋರ್ಖಾಮ್ ಗಡಿಯಲ್ಲಿ ಪಾಕಿಸ್ತಾನಕ್ಕೆ ಸೇರಿದ ಟ್ರಕ್‌ವೊಂದರಲ್ಲಿ ಸಾಗಿಸುತ್ತಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ತೆರವು ಪೂರ್ಣಗೊಳಿಸಿದ ಬ್ರಿಟನ್, ಇಟಲಿ

ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳು ಸೇರಿದಂತೆ ಬಹುತೇಕ ದೇಶಗಳು ಅಫ್ಗಾನಿಸ್ತಾನದಿಂದ ತೆರವು ಕಾರ್ಯಾಚರಣೆಯನ್ನು ಅಂತಿಮಗೊಳಿಸುವ ಹಂತದಲ್ಲಿವೆ.

ದೇಶ ತೊರೆಯುವ ಗಡುವು ಸಮೀಪಿಸುತ್ತಿದ್ದು, ಬ್ರಿಟನ್ ಶನಿವಾರ ತನ್ನ ಕೊನೆಯ ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿತು. ತನ್ನ ಸೈನ್ಯವನ್ನು ಅಫ್ಗಾನಿಸ್ತಾನದಿಂದ ಹಿಂಪಡೆಯುವ ಮುನ್ನ ಕೊನೆಯ ತೆರವು ಕಾರ್ಯಾಚರಣೆ ಮುಗಿಸಲಾಗಿದೆ ಎಂದು ತಿಳಿಸಿದೆ. ನಾಗರಿಕರ ತೆರವಿನ ಬಳಿಕ, ಅಫ್ಗನ್‌ನಲ್ಲಿರುವ ತನ್ನ ಸೈನ್ಯವನ್ನು ಕರೆತರಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ರಕ್ಷಣಾ ಸಿಬ್ಬಂದಿ ಸಚಿವಾಲಯದ ಮುಖ್ಯಸ್ಥ ಜನರಲ್ ಸರ್ ನಿಕ್ ಕಾರ್ಟರ್ ಹೇಳಿದ್ದಾರೆ. ಬ್ರಿಟನ್ ಕಳೆದ 14 ದಿನಗಳಲ್ಲಿ 13 ಸಾವಿರ ಜನರನ್ನು ತೆರವು ಮಾಡಿದೆ.

ತನ್ನ ಕೊನೆಯ ವಿಮಾನ ರೋಮ್‌ನಲ್ಲಿ ಇಳಿದಿದ್ದಾಗಿ ಇಟಲಿ ಹೇಳಿದೆ. ಆದರೂ, ಅಫ್ಗನ್ನರಿಗೆ, ಅಮೆರಿಕದ ಜೊತೆ ಸೇರಿ ನೆರವು ನೀಡಲು ಬದ್ಧ ಎಂದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.