
ಸಾವು
ಪ್ರಾತಿನಿಧಿಕ ಚಿತ್ರ
ಜೆರುಸಲೇಂ: ಗಾಜಾದ ದಕ್ಷಿಣ ಭಾಗದ ರಫಾ ನಗರದಲ್ಲಿ ಅಡಗಿಸಿಡಲಾಗಿದ್ದ ಸ್ಫೋಟಕವು ಸಿಡಿದಿದ್ದರಿಂದ ತನ್ನ ಮೂವರು ಯೋಧರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ ಬುಧವಾರ ತಿಳಿಸಿದೆ.
ಮಂಗಳವಾರ ಸಂಭವಿಸಿದ ಈ ಘಟನೆಯಲ್ಲಿ ಇತರ ಮೂವರು ಸೈನಿಕರು ಗಾಯಗೊಂಡಿದ್ದಾರೆ. ಈ ಮೂಲಕ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಗಾಜಾ ನಗರದಲ್ಲಿ ಹಮಾಸ್ ಬಂಡುಕೋರರ ಕಾರ್ಯಾಚರಣೆ ಆರಂಭಿಸಿದ ಬಳಿಕ ಕನಿಷ್ಠ 290 ಯೋಧರು ಬಲಿಯಾಗಿದ್ದಾರೆ ಎಂದು ಅದು ಹೇಳಿದೆ.
ಗಾಜಾ–ಈಜಿಪ್ಟ್ ಗಡಿಯ ಪೂರ್ವ ರಫಾ ಭಾಗದಲ್ಲಿ ಸೀಮಿತ ದಾಳಿಯನ್ನು ಕೈಗೊಳ್ಳಲಾಗಿದೆ ಎಂದು ಇಸ್ರೇಲ್ ಹೇಳಿದೆ. ಆದರೆ, ಗಡಿ ನಗರದಲ್ಲಿ ಇಸ್ರೇಲ್ ಪಡೆಗಳು ತೀವ್ರಗತಿಯಲ್ಲಿ ದಾಳಿ ನಡೆಸುತ್ತಿವೆ ಎಂದು ರಫಾ ನಗರದಲ್ಲಿರುವ ಪ್ಯಾಲೆಸ್ಟೀನಿಯನ್ನರು ಬುಧವಾರ ಆರೋಪಿಸಿದ್ದಾರೆ.
ರಫಾ ಮೇಲಿನ ದಾಳಿಯಿಂದಾಗಿ ಈ ಭಾಗದಲ್ಲಿ ನೆಲೆ ಕಂಡುಕೊಂಡಿದ್ದ 10 ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ನಿರಾಶ್ರಿತರಾಗಿದ್ದಾರೆ. ಇವರ ಪೈಕಿ ಹಲವರು ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಯುದ್ಧ ಆರಂಭವಾದ ಬಳಿಕ ನಿರಾಶ್ರಿತರಾದವರಾಗಿದ್ದಾರೆ. ಇವರು ಇದೀಗ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ಶಿಬಿರಗಳಲ್ಲಿ ಆಹಾರ, ನೀರು ಸೇರಿದಂತೆ ಇನ್ನಿತರ ಮೂಲಸೌಕರ್ಯಗಳೇ ಇಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.