ADVERTISEMENT

ಕೊರೊನಾ ವೈರಸ್ ಬಂದಿದ್ದು ವುಹಾನ್‌ ಲ್ಯಾಬ್‌ನಿಂದ ಎನ್ನಲು ಸಾಕ್ಷ್ಯವಿದೆ: ಅಮೆರಿಕ

ಏಜೆನ್ಸೀಸ್
Published 4 ಮೇ 2020, 2:17 IST
Last Updated 4 ಮೇ 2020, 2:17 IST
ಚೀನಾದ ವುಹಾನ್‌ ವೈರಾಣು ಪ್ರಯೋಗಾಲಯದ ಚಿತ್ರ
ಚೀನಾದ ವುಹಾನ್‌ ವೈರಾಣು ಪ್ರಯೋಗಾಲಯದ ಚಿತ್ರ    

ವಾಷಿಂಗ್ಟನ್‌: ಕೊರೊನಾ ವೈರಸ್‌ನ ಉಗಮ ಸ್ಥಾನ ವುಹಾನ್‌ನ ವನ್ಯಜೀವಿ ಮಾಂಸ ಮಾರುಕಟ್ಟೆಯಲ್ಲ, ಅದೇ ವುಹಾನ್‌ನ ವೈರಾಣು ಲ್ಯಾಬ್‌ ಎಂಬ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಾದವನ್ನು ಅಮೆರಿಕದ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಬೆಂಬಲಿಸಿದ್ದಾರೆ.

ಅಮೆರಿಕದ ಕೇಂದ್ರ ಗುಪ್ತದಳದ ಮಾಜಿ ಮುಖ್ಯಸ್ಥರು, ಚೀನಾದೊಂದಿಗೆ ನಡೆಯುತ್ತಿದ್ದ ವ್ಯವಹಾರಗಳಲ್ಲಿ ಮುಂದಿರುತ್ತಿದ್ದ ಅಧಿಕಾರಿಗಳ ಪೈಕಿ ಪ್ರಮುಖರೂ ಆಗಿರುವ ಪಾಂಪಿಯೊ ಅಮೆರಿಕದ ‘ಎಬಿಸಿ’ ಸುದ್ದಿ ವಾಹಿನಿ ನಡೆಸಿದ್ದ ‘ದಿಸ್‌ ವೀಕ್‌’ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

‘ಕೊರೊನಾ ವೈರಸ್‌ ಬಂದಿದ್ದು ಚೀನಾದ ವುಹಾನ್‌ನ ಪ್ರಯೋಗಾಲಯದಿಂದ ಎಂದು ಹೇಳಲು ನಮಗೆ ಸಾಕಷ್ಟು ಪುರಾವೆಗಳಿವೆ,’ ಎಂದು ಪಾಂಪಿಯೊ ಹೇಳಿದ್ದಾರೆ. ಆದರೆ, ‘ವೈರಸ್‌ ಅನ್ನು ಜೈವಿಕವಾಗಿ ಮಾರ್ಪಾಡು ಮಾಡಿರುವ ಬಗ್ಗೆ ಸಾಕ್ಷ್ಯಗಳಿಲ್ಲ,’ ಎಂದಿರುವ ಗುಪ್ತದಳದ ಮಾಹಿತಿಯನ್ನು ಇದೇ ವೇಳೆ ಅವರು ಒಪ್ಪಿಕೊಂಡಿದ್ದಾರೆ.

ADVERTISEMENT

‘ವೈರಸ್‌ ಹೇಗೆ ಹುಟ್ಟಿತು ಎಂಬುದರ ಕುರಿತ ವರದಿಗಳನ್ನು ಪರಿಶೀಲಿಸಿರುವ ಗುಪ್ತಚರ ಇಲಾಖೆ ಅಧಿಕಾರಿಗಳು ಅವುಗಳನ್ನು ವರ್ಗೀರಿಸಿದ್ದಾರೆ. ಕೊರೊನಾ ವೈರಸ್‌ನಿಂದ ಸೋಂಕುಗೊಂಡಿದ್ದ ಪ್ರಾಣಿಯೊಂದನ್ನು ಪ್ರಯೋಗಾಲಯದಲ್ಲಿ ನಾಶ ಮಾಡಲಾಗಿದೆ. ಆ ವೇಳೆ ಆಕಸ್ಮಿಕವಾಗಿ ಅಲ್ಲಿದ್ದ ಹಲವರು ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಕೊರೊನಾ ವೈರಸ್‌ ಹೇಗೆ ಹರಡಿತು ಎಂಬುದರ ಬಗೆಗಿನ ಹಲವು ಸಿದ್ಧಾಂತಗಳಲ್ಲಿ ಇದೂ ಒಂದು. ಇದನ್ನು ಮತ್ತಷ್ಟು ಅಧ್ಯಯನ ಮಾಡಬೇಕಾಗಿದೆ,’ ಎಂದು ಪಾಂಪಿಯೊ ಹೇಳಿದ್ದಾರೆ.

ಈ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ‘ವೈರಸ್‌ನ ಉಗಮ ವುಹಾನ್‌ ಲ್ಯಾಬ್‌ ಎಂಬುದು ನನ್ನ ಬಲವಾದ ನಂಬಿಕೆ,’ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಏನಾದರೂ ಸಾಕ್ಷ್ಯವಿದೆಯೇ ಎಂದು ಕೇಳಿದ ಪ್ರಶ್ನೆಗೆ ‘ಅದನ್ನು ನಾನು ಹೇಳುವಂತಿಲ್ಲ,’ ಎಂದು ಹೇಳಿದ್ದರು.

ಚೀನಾದ ತಿರುಗೇಟು

ಅಮೆರಿಕ ತನ್ನ ಮೇಲೆ ಮಾಡುತ್ತಿರುವ ಆರೋಪಗಳಿಗೆಲ್ಲ ಚೀನಾ ಕಿರುಚಿತ್ರ ತಯಾರಿಸಿ ತಿರುಗೇಟು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.