ADVERTISEMENT

ಸುಡಾನ್: ಚಿನ್ನದ ಗಣಿ ಕುಸಿತ– 38 ಜನರ ಸಾವು

ಐಎಎನ್ಎಸ್
Published 29 ಡಿಸೆಂಬರ್ 2021, 2:48 IST
Last Updated 29 ಡಿಸೆಂಬರ್ 2021, 2:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಖರ್ಟೌಮ್: ಚಿನ್ನದ ಗಣಿಯಲ್ಲಿ ಕುಸಿತ ಸಂಭವಿಸಿದ ಪರಿಣಾಮ ಕನಿಷ್ಠ 38 ಮಂದಿ ಸಾವಿಗೀಡಾಗಿರುವ ಘಟನೆ ದಕ್ಷಿಣ ಸುಡಾನ್‌ನ ಪಶ್ಚಿಮ ಕೊರ್ಡೋಫಾನ್ ರಾಜ್ಯದಲ್ಲಿ ನಡೆದಿದೆ. ಈ ಕುರಿತಂತೆ ಸರ್ಕಾರಿ ಸ್ವಾಮ್ಯದ ಕಂಪನಿಯು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

'ಉಮ್ ಡ್ರೈಸಾಯಾ ಗಣಿಯಲ್ಲಿ ಕುಸಿತದ ಪರಿಣಾಮವಾಗಿ ಸಾವಿಗೀಡಾದ 38 ಗಣಿ ಕಾರ್ಮಿಕರಿಗೆ ಸುಡಾನ್‌ನ ಮಿನರಲ್ ರಿಸೋರ್ಸಸ್ ಕಂಪನಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೆಶಕ ಸಂತಾಪ ವ್ಯಕ್ತಪಡಿಸಿದ್ದಾರೆ’ ಎಂದು ಮಂಗಳವಾರ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕುಸಿದಿರುವ ಚಿನ್ನದ ಗಣಿಯು ಪಶ್ಚಿಮ ಕೊರ್ಡೋಫಾನ್ ರಾಜ್ಯದ ಎಲ್ ನುಹುದ್ ಪಟ್ಟಣದ ಸಮೀಪದಲ್ಲಿದೆ. ಸುಡಾನ್‌ನ ರಾಜಧಾನಿ ಖಾರ್ಟೂಮ್‌ನ ಪಶ್ಚಿಮಕ್ಕೆ ಸುಮಾರು 500 ಕಿಮೀ ದೂರದಲ್ಲಿದೆ.

ADVERTISEMENT

ಈ ಪ್ರದೇಶವು ಗಣಿಗಾರಿಕೆಗೆ ಸೂಕ್ತವಲ್ಲ ಎಂದು ಕೊರ್ಡೋಫಾನ್ ರಾಜ್ಯ ಸರ್ಕಾರ ಮತ್ತು ರಾಜ್ಯದ ಭದ್ರತಾ ಸಮಿತಿಯು ನಿರ್ಧಾರಕ್ಕೆ ಬಂದಿದ್ದು, ಗಣಿಗಾರಿಕೆಯನ್ನು ಮುಚ್ಚಲು ನಿರ್ಧರಿಸಲಾಗಿತ್ತು.

ಆದರೆ, ಸರ್ಕಾರದ ನಿರ್ಧಾರದ ಹೊರತಾಗಿಯೂ ಗಣಿಗಾರರು ಮತ್ತೆ ಗಣಿಗಾರಿಕೆಗೆ ನುಸುಳಿ ಕೆಲಸ ಮಾಡುತ್ತಿದ್ದರು ಎಂದು ಅದು ಹೇಳಿದೆ.

ರೆಡ್ ಸೀ, ನಹ್ರ್ ಅಲ್-ನೀಲ್, ದಕ್ಷಿಣ ಕೊರ್ಡೋಫಾನ್, ಪಶ್ಚಿಮ ಕೊರ್ಡೋಫಾನ್ ಮತ್ತು ಉತ್ತರದ ರಾಜ್ಯಗಳು ಸೇರಿದಂತೆ ಸುಡಾನ್‌ನಾದ್ಯಂತ ಸಾಂಪ್ರದಾಯಿಕ ಗಣಿಗಾರಿಕೆ ಉದ್ಯಮದಲ್ಲಿ ಸುಮಾರು 20 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಧಿಕೃತ ಅಂಕಿ ಅಂಶಗಳ ಪ್ರಕಾರ, ಸಾಂಪ್ರದಾಯಿಕ ಗಣಿಗಾರಿಕೆಯು ಸುಡಾನ್‌ನಲ್ಲಿನ ಒಟ್ಟು ಚಿನ್ನದ ಉತ್ಪಾದನೆಯಲ್ಲಿ ಸುಮಾರು ಶೇಕಡ 75ರಷ್ಟು ಕೊಡುಗೆ ನೀಡುತ್ತದೆ, ಇದು ವರ್ಷಕ್ಕೆ 93 ಟನ್‌ಗಳನ್ನು ಮೀರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.