ADVERTISEMENT

‘ಅಮೆರಿಕದ ಕನಸು’, ‘ಸಮಾಜವಾದಿ ದುಃಸ್ವಪ್ನ’ದ ನಡುವಣ ಆಯ್ಕೆಯ ಚುನಾವಣೆ: ಟ್ರಂಪ್‌

ಪಿಟಿಐ
Published 30 ಅಕ್ಟೋಬರ್ 2020, 6:33 IST
Last Updated 30 ಅಕ್ಟೋಬರ್ 2020, 6:33 IST
ಟಾಂಪಾದಲ್ಲಿರುವ ರೇಮಂಡ್‌ ಜೇಮ್ಸ್‌ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಡೊನಾಲ್ಡ್‌ ಟ್ರಂಪ್‌ ಮತ್ತು ಮೆಲಾನಿಯಾ ಟ್ರಂಪ್‌ ಅವರು ಅಭಿಮಾನಿಗಳತ್ತ ಕೈಬೀಸಿದರು –ಎಪಿ/ಪಿಟಿಐ ಚಿತ್ರ 
ಟಾಂಪಾದಲ್ಲಿರುವ ರೇಮಂಡ್‌ ಜೇಮ್ಸ್‌ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಡೊನಾಲ್ಡ್‌ ಟ್ರಂಪ್‌ ಮತ್ತು ಮೆಲಾನಿಯಾ ಟ್ರಂಪ್‌ ಅವರು ಅಭಿಮಾನಿಗಳತ್ತ ಕೈಬೀಸಿದರು –ಎಪಿ/ಪಿಟಿಐ ಚಿತ್ರ    

ವಾಷಿಂಗ್ಟನ್: ‘ನವೆಂಬರ್‌3ರಂದು ನಿಗದಿಯಾಗಿರುವ ಅಧ್ಯಕ್ಷೀಯ ಚುನಾವಣೆಯು ‘ಅಮೆರಿಕದ ಕನಸು ಹಾಗೂ ಸಮಾಜವಾದಿ ದುಃಸ್ವಪ್ನ’ದ ನಡುವಣ ಆಯ್ಕೆಯ ಚುನಾವಣೆಯಾಗಿದೆ’ ಎಂದು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಗುರುವಾರ ಟಾಂಪಾದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ‘ಡೆಮಾಕ್ರಟಿಕ್‌ ಪಕ್ಷದ ಜೊ ಬೈಡನ್, ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಅತ್ಯಂತ ಕೆಟ್ಟ ಅಭ್ಯರ್ಥಿ’ ಎಂದು ಕಾಲೆಳೆದರು.

‘ಬೈಡನ್‌ ಅಧ್ಯಕ್ಷ ಗಾದಿಗೆ ಏರಿದರೆ ವೆನಿಜುವೆಲಾದ ಹಾಗೆ ಅಮೆರಿಕದಲ್ಲೂ ಆಂತರಿಕ ಕ್ಷೋಭೆ ಉಂಟಾಗಿ ಆಡಳಿತ ಯಂತ್ರವೇ ಕುಸಿಯಲಿದೆ’ ಎಂದು ತಿಳಿಸಿದರು.

ADVERTISEMENT

‘ನಾನು ಅಧ್ಯಕ್ಷನಾಗಿರುವವರೆಗೂ ಅಮೆರಿಕವನ್ನು ಸಮಾಜವಾದಿ ರಾಷ್ಟ್ರವನ್ನಾಗಿ ಮಾರ್ಪಾಡಿಸಲು ಅವಕಾಶ ನೀಡುವುದಿಲ್ಲ. ಈ ಚುನಾವಣೆಯಲ್ಲಿ ನಾವು ಮಾರ್ಕ್ಸ್‌ವಾದಿ, ಸಮಾಜವಾದಿ, ಗಲಭೆಕೋರರು, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವವರನ್ನು ಸೋಲಿಸಬೇಕಿದೆ. ನಿಮ್ಮ ಬೆಂಬಲದೊಂದಿಗೆ ನಾವು ಅರಾಜಕತಾವಾದಿಗಳನ್ನು ಮಣಿಸಲು ಹೊರಟಿದ್ದೇವೆ. ನಾವು ಅಮೆರಿಕನ್ನರ ಹಿತಕ್ಕಾಗಿ ಹೋರಾಡುತ್ತೇವೆ’ ಎಂದು 77 ವರ್ಷದ ಟ್ರಂಪ್‌ ನುಡಿದಿದ್ದಾರೆ.

‘ಸೋಲು, ಗೆಲುವು ಹಾಗೂ ಡ್ರಾ ಬಗ್ಗೆನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅಮೆರಿಕದ ಇತಿಹಾಸದಲ್ಲಿ ಮೊದಲ ಬಾರಿಗೆ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರಿಗೆ ಅತ್ಯಂತ ಅಸಮರ್ಥ ಎದುರಾಳಿ ಸಿಕ್ಕಿದ್ದಾರೆ. ಇದು ದುರ್ದೈವದ ಸಂಗತಿ’ ಎಂದೂ ವ್ಯಂಗ್ಯವಾಡಿದ್ದಾರೆ.

‘ಅಧ್ಯಕ್ಷೀಯ ಚುನಾವಣೆಗೆ ಕೇವಲ ಐದು ದಿನಗಳು ಬಾಕಿ ಇವೆ. ಈ ಅವಧಿಯಲ್ಲಿ ನಾವು ಫ್ಲಾರಿಡಾದ ಮತದಾರರ ಮನಗೆಲ್ಲುತ್ತೇವೆ. ಮತ್ತೆ ನಾಲ್ಕು ವರ್ಷಗಳ ಕಾಲ ಶ್ವೇತಭವನದಲ್ಲಿ ಅಧಿಕಾರ ನಡೆಸುತ್ತೇವೆ. ಹಿಸ್ಪಾನಿಕ್‌ ಮತ್ತು ಅಮೆರಿಕನ್ನರ ಮತಗಳನ್ನು ಸೆಳೆದು ದಾಖಲೆ ಬರೆಯಲಿದ್ದೇವೆ. ದೇಶದ ಎಲ್ಲೆಡೆಯೂ ನಾವು ಚುರುಕಿನಿಂದ ಕೆಲಸ ಮಾಡುತ್ತಿದ್ದೇವೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.